ಅತ್ಯುನ್ನತ ಕನ್ನಡ ಕೇಂದ್ರ ಮೈಸೂರಲ್ಲೇ ಉಳಿಸುವ ಸಂಬಂಧ ಕನ್ನಡ ಕ್ರಿಯಾ ಸಮಿತಿ ನಿರ್ಣಯ

| N/A | Published : Feb 06 2025, 01:32 AM IST / Updated: Feb 06 2025, 06:08 AM IST

ಸಾರಾಂಶ

ಶಾಸ್ತ್ರೀಯ ಭಾಷಾ ಕೇಂದ್ರವನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಳಿಸಬೇಕು ಎಂಬ ಆಲೋಚನೆ ಕೈ ಬಿಡಬೇಕೆಂದು ಸಭೆ ಒಕ್ಕೊರಲಿನಿಂದ ಒತ್ತಾಯಿಸಿತು.

 ಮೈಸೂರು : ಶಾಸ್ತ್ರೀಯ ಭಾಷಾ ಅತ್ಯುನ್ನತ ಕನ್ನಡ ಕೇಂದ್ರವನ್ನು ಮೈಸೂರಿನಲ್ಲಿಯೇ ಉಳಿಸುವ ಸಂಬಂಧ ಕನ್ನಡ ಕ್ರಿಯಾ ಸಮಿತಿ ಹಾಗು ಶಾಸ್ತ್ರೀಯ ಭಾಷಾ ಕನ್ನಡ ಹೋರಾಟ ಸಮಿತಿ ವತಿಯಿಂದ ಬುಧವಾರ ನೃಪತುಂಗ ಕನ್ನಡ ಶಾಲೆಯಲ್ಲಿ ನಡೆದ ಸಾಹಿತಿಗಳು, ಕನ್ನಡ ಪರ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರ ಸಭೆಯಲ್ಲಿ ಹಲವು ನಿರ್ಣಯ ಕೈಗೊಳ್ಳಲಾಯಿತು.

ಮೈಸೂರಿನಲ್ಲಿರುವ ಶಾಸ್ತ್ರೀಯ ಭಾಷಾ ಅತ್ಯುನ್ನತ ಕನ್ನಡ ಕೇಂದ್ರವನ್ನು ಭಾರತೀಯ ಭಾಷಾ ಸಂಸ್ಥೆಯಿಂದ ಪ್ರತ್ಯೇಕಿಸಿ, ಸ್ವಾಯತ್ತತೆ ನೀಡಿ ಮುಂದುವರೆಸಲಾಗುವುದು ಎಂಬ ಕೇಂದ್ರ ಸರ್ಕಾರದ ನಿಲುವನ್ನು ಸಭೆ ಸ್ವಾಗತಿಸುತ್ತದೆ. ಈ ತೀರ್ಮಾನವು ಕೂಡಲೇ ಅದೇಶವಾಗಿ ಹೊರ ಬರಬೇಕು ಎಂದು ಆವರು ಒತ್ತಾಯಿಸಿದ್ದಾರೆ.

ಆದರೆ ಇದೇ ವೇಳೆ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಳಿಸಬೇಕು ಎಂಬ ಆಲೋಚನೆ ಕೈ ಬಿಡಬೇಕೆಂದು ಸಭೆ ಒಕ್ಕೊರಲಿನಿಂದ ಒತ್ತಾಯಿಸಿತು. ಏಕೆಂದರೆ ಈ ಕೇಂದ್ರವು ಮೈಸೂರಿನಲ್ಲಿ ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದಿದೆ. ಅಲ್ಲದೆ ಈ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಮೈಸೂರು ವಿವಿ ಜಾಗ ಕೊಡುವುದಾಗಿ ಒಪ್ಪಿಗೆ ನೀಡಿದೆ. ಇದಕ್ಕೆ ರಾಜ್ಯ ಸರ್ಕಾರದ ಸಮ್ಮತಿಯ ಆದೇಶವೂ ಆಗಿದೆ ಎಂದರು.ಜೊತೆಗೆ ಮೈಸೂರು ನಗರ ಪಾರಂಪರಿಕ ಹಿನ್ನೆಲೆ ಕೇಂದ್ರವಾಗಿದ್ದು ವಿದ್ವಾಂಸರ ಬೀಡಾಗಿದೆ. ಪ್ರಶಾಂತ ವಾತಾವರಣದ ಸ್ಥಳವಾಗಿದೆ. ಇದನ್ನೆಲ್ಲ ಗಮನದಲ್ಲಿಟ್ಟು ಕೊಂಡು ಬೆಂಗಳೂರಿಗೆ ವರ್ಗಾಯಿಸುವ ಅಲೋಚನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ಕರ್ನಾಟಕದ ಮುಖ್ಯಮಂತ್ರಿ, ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಪ್ರಮುಖ ಲೋಕಸಭಾ ಹಾಗು ರಾಜ್ಯಸಭಾ ಸಮಸ್ಯರಿಗೆ ಕಳುಹಿಸಬೇಕು ಎಂದು ಅವರು ತೀರ್ಮಾನಿಸಲಾಯಿತು.

ಈ ಸಂಬಂಧ ಮೈಸೂರಿನಿಂದ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಹಾಗು ಜಿಲ್ಲಾ ಉಸ್ತುವಾರಿ ಸಚಿವರನ್ನು ಶೀಘ್ರವೇ ಭೇಟಿಯಾಗಿ ಮೈಸೂರಿನಲ್ಲಿ ಉಳಿಸುವಂತೆ ಅಗತ್ಯ ಆಗ್ರಹ ರಾಜ್ಯ ಸರ್ಕಾರ ಮಂಡಿಸುವಂತೆ ಕೋರಲು ನಿರ್ಣಯಿಸಲಾಯಿತು.ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಹಾಗು ಚಾಮರಾಜ ಲೋಕಸಭಾ ಸದಸ್ಯ ಸುನೀಲ್ ಬೋಸ್ ಅವರನ್ನು ಭೇಟಿ ಮಾಡಬೇಕು ಎಂದು ನಿರ್ಣಯಿಸಲಾಯಿತು.ಮುಂದಿನ ಕಾರ್ಯಕ್ರಮ ರೂಪಿಸಲು ಫೆ. 8 ರಂದು ಸಂಜೆ 4 ಗಂಟೆಗೆ ನೃಪತುಂಗ ಕನ್ನಡ ಶಾಲೆ ಆವರಣದಲ್ಲಿ ಸಭೆ ಕರೆಯಲಾಗಿದೆ. ಆಸಕ್ತರು ಭಾಗವಹಿಸಬಹುದು ಎಂದು ಕನ್ನಡ ಕ್ರಿಯಾ ಸಮಿತಿಯ ಸ.ರ. ಸುದರ್ಶನ, ಶಾಸ್ತ್ರೀಯ ಕನ್ನಡ ಭಾಷಾ ಹೋರಾಟ ಸಮಿತಿಯ ನಾ. ದಿವಾಕರ ಮನವಿ ಮಾಡಿದ್ದಾರೆ.