ಕನ್ನಡ ಸಿನಿಮಾಗಳಿಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ. ಇದಕ್ಕಾಗಿ ಸರ್ಕಾರ ಮಿನಿ ಚಿತ್ರ ಮಂದಿರ ನಿರ್ಮಿಸಬೇಕು ಎಂದು ನಿರ್ದೇಶಕ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಕನ್ನಡ ಸಿನಿಮಾಗಳಿಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ. ಇದಕ್ಕಾಗಿ ಸರ್ಕಾರ ಮಿನಿ ಚಿತ್ರ ಮಂದಿರ ನಿರ್ಮಿಸಬೇಕು ಎಂದು ನಿರ್ದೇಶಕ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.

ಅವರು ತುಮಕೂರಿನ ಕನ್ನಡ ಭವನದಲ್ಲಿ ಜನ ಮಿತ್ರ ಮೂವೀಸ್ ವತಿಯಿಂದ ಹಮ್ಮಿಕೊಂಡಿದ್ದ ‘ಸಮುದಾಯದತ್ತ ಸಿನಿಮಾ–ರಾಜ್ಯಾದ್ಯಂತ ಚಿತ್ರಯಾತ್ರೆ ಚಾಲನೆಯಲ್ಲಿ ಆಶಯ ನುಡಿಗಳನ್ನಾಡಿದರು.

ಇತ್ತೀಚಿನ ದಿನಗಳಲ್ಲಿ ಪರ್ಯಾಯ ಸಿನಿಮಾ ಎದುರಿಸುವ ಸವಾಲು ದುಪ್ಪಟ್ಟಾಗಿದೆ. ಸಿನಿಮಾ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಮಲ್ಟೆಪ್ಲೆಕ್ಸ್ಗಳಲ್ಲಿ ಒಂದು ವಾರ ಸಿನಿಮಾ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಜನರನ್ನು ತಲುಪಲು, ನಿರ್ಮಾಪಕರಿಗೆ ಹಣ ಒದಗಿಸುವ ಉದ್ದೇಶದಿಂದ ಸಮುದಾಯದತ್ತ ಸಿನಿಮಾ ಚಿತ್ರಯಾತ್ರೆ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ಮೊದಲ ಕಾರ್ಯಕ್ರಮ ಆಯೋಜಿಸಲಾಗಿದ್ದು, ‘ತಾಯಿ ಕಸ್ತೂರ್ ಗಾಂಧಿ’ ಸಿನಿಮಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಚಿತ್ರ ಪ್ರಶಸ್ತಿ ಪಡೆದಿದೆ ಎಂದರು.

ಚಿಂತಕ ಚ.ಹ.ರಘುನಾಥ ಚಿತ್ರಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಹೆಣ್ಣಿನ ಸಂವೇದನೆ, ತಾಯಿ ಕರುಳು ಇಲ್ಲದೆ ಜನಪರ ಲೇಖಕನಾಗಲು ಸಾಧ್ಯವಿಲ್ಲ. ಬರಗೂರರಲ್ಲಿ ಎರಡು ಅಂಶಗಳು ಇವೆ. ಬರಗೂರರು ಪ್ರಭುತ್ವ ಪ್ರಶಸ್ತಿ ನಿರಾಕರಿಸಿ ಸಿನಿಮಾವನ್ನು ಜನರ ಬಳಿಗೆ ಕೊಂಡೊಯ್ಯತ್ತಿರುವುದು ಬಹುಮುಖ್ಯ. ಗಾಂಧಿ ಎಂಬ ಮೇಷ್ಟ್ರನ್ನು ಈ ನಿಮಾದ ಮೂಲಕ ಕನ್ನಡದ ಮೇಷ್ಟ್ರು ಬರಗೂರರು ಜನತೆಗೆ ತಲುಪಿಸುತ್ತಿರುವುದು ಗಮನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿಂತಕ ಕೆ.ದೊರೈರಾಜ್ ಮಾತನಾಡಿದರು. ಈ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಡಿಡಿಪಿಐ ರಘುಚಂದ್ರ, ಪಿ.ಯು. ಡಿ.ಡಿ.ಪಿ.ಐ ಡಾ. ಬಾಲಗುರುಮೂರ್ತಿ, ಪ್ರಾಧ್ಯಾಪಕ ಜಿ.ಪ್ರಶಾಂತ ನಾಯಕ್ ಇತರರು ಹಾಜರಿದ್ದರು. ಡಾ. ಓ. ನಾಗರಾಜು ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನೀಂದ್ರಕುಮಾರ್ ವಂದಿಸಿ ಕನ್ನಡ ಉಪನ್ಯಾಸಕ ಎ. ರಾಮಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.