ಕನಕ, ಶರೀಫರ ನೆಲದಲ್ಲಿಂದು ಕನ್ನಡ ಡಿಂಡಿಮ

| Published : Feb 11 2025, 12:46 AM IST

ಸಾರಾಂಶ

ಕನಕ, ಶರೀಫರ ನೆಲದಲ್ಲಿಂದು ಕನ್ನಡ ಡಿಂಡಿಮ. ಫೆ.೧೧ರಂದು ತಾಲೂಕು ೫ನೇ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಪಟ್ಟಣದ ಜನತೆ ಕನ್ನಡಮ್ಮನ ನುಡಿತೇರು ಎಳೆಯಲು ಸಜ್ಜಾಗಿದ್ದಾರೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಕನಕ, ಶರೀಫರ ನೆಲದಲ್ಲಿಂದು ಕನ್ನಡ ಡಿಂಡಿಮ. ಫೆ.೧೧ರಂದು ತಾಲೂಕು ೫ನೇ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಪಟ್ಟಣದ ಜನತೆ ಕನ್ನಡಮ್ಮನ ನುಡಿತೇರು ಎಳೆಯಲು ಸಜ್ಜಾಗಿದ್ದಾರೆ.

ಪಟ್ಟಣದೆಲ್ಲೆಡೆ ಸಾಹಿತ್ಯದ ಕಂಪು ಪಸರಿಸುತ್ತಿದೆ. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಒಂದೆಡೆ ಸೇರಿ ನಾಡು ನುಡಿಯ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲು ಅಣಿಯಾಗುತ್ತಿದ್ದಾರೆ. ಸ್ಥಳೀಯರು ಉತ್ಸಾಹದಿಂದ ಕನ್ನಡಮ್ಮನ ಕೈಂಕರ್ಯಕ್ಕೆ ಕಂಕಣಬದ್ಧರಾಗಿದ್ದಾರೆ.ಒಂದೆಡೆ ಸಮಾನತೆ, ಜಾತ್ಯತೀತತೆ ಸಾರಿದ ಕನಕದಾಸರ ಜನ್ಮಭೂಮಿ ಬಾಡ, ಇನ್ನೊಂದೆಡೆ ತಮ್ಮ ತತ್ವ ಪದಗಳ ಮೂಲಕ ಬದುಕಿನ ಮಾರ್ಗ ತೋರಿಸಿಕೊಟ್ಟ ಸಂತ ಶರೀಫರ ಶಿಶುವಿನಹಾಳ ಜತೆಗೆ ವಿ.ಕೃ. ಗೋಕಾಕ ರಂತಹ ಸಾಹಿತ್ಯ ದಿಗ್ಗಜರು, ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಆಡಿ ನಲಿದಾಡಿದ ಸ್ಥಳ ಶಿಗ್ಗಾಂವಿಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಜನರಲ್ಲಿ ಸಂತಸ ಮೂಡಿದೆ.ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ವಿಜಯಲಕ್ಷ್ಮೀ ತಿರ್ಲಾಪುರ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಅವರಿಗೆ ಕಸಾಪ ಪದಾಧಿಕಾರಿಗಳು ಆಹ್ವಾನ ನೀಡಿ ಗೌರವಿಸಿದ್ದಾರೆ. ತವರೂರಿನ ಸಾಧಕಿ ಸಮ್ಮೇಳನಾಧ್ಯಕ್ಷರಾಗಿದ್ದು ಸ್ಥಳೀಯ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಸಮ್ಮೇಳನದಲ್ಲಿ ೩ ಗೋಷ್ಠಿ ನಡೆಯಲಿವೆ. ಬೆಳಗ್ಗೆ ೭,೩೦ಕ್ಕೆ ಧ್ವಜಾರೋಹಣ, ಬೆಳಗ್ಗೆ ೮.೩೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಬೆಳಗ್ಗೆ ೧೧ಕ್ಕೆ ವೇದಿಕೆ ಕಾರ್ಯಕ್ರಮ, ಮಧ್ಯಾಹ್ನ ಗೋಷ್ಠಿಗಳು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.ವಿದ್ವಜ್ಜನರಿಂದ ಅರ್ಥಪೂರ್ಣ ಗೋಷ್ಠಿಗಳು, ಸಮಕಾಲೀನ ವಿಷಯಗಳ ಬಗ್ಗೆ ಬಿಸಿಬಿಸಿ ಚರ್ಚೆ, ಬೇರೆ ಬೇರೆ ಕ್ಷೇತ್ರದ ತಜ್ಞರಿಂದ ಚಿಂತನ ಮಂಥನಕ್ಕೆ ಸಮ್ಮೇಳನ ಸಾಕ್ಷಿಯಾಗಲಿರುವುದು ಮತ್ತೊಂದು ವಿಶೇಷವಾಗಿದೆ.

ರುಚಿಕಟ್ಟಾದ ಊಟ:ಸಮ್ಮೇಳನಕ್ಕೆ ಬಂದ ಅತಿಥಿಗಳಿಗೆ ಉತ್ತರ ಕರ್ನಾಟಕದ ಶೈಲಿಯ ಊಟದ ವ್ಯವಸ್ಥೆಗೆ ಸಕಲ ಸಿದ್ಧತೆ ಕೂಡ ನಡೆದಿದೆ. ಬೆಳಗ್ಗೆ ಉಪ್ಪಿಟ್ಟು, ಶಿರಾ, ಮಧ್ಯಾಹ್ನ ಗೋಧಿ ಹುಗ್ಗಿಯ ಭೋಜನ ವ್ಯವಸ್ಥೆ ಮಾಡಲಾಗಿದೆ.