ಸಾರಾಂಶ
ಅಬ್ಬರದ ಭಾಷಣ ಮಾಡಿದ ಯತ್ನಾಳ, ಶ್ರೀಗಳ ಸಾನ್ನಿಧ್ಯಕನ್ನಡಪ್ರಭ ವಾರ್ತೆ ಕಾರವಾರ
ಗೋವಾ ಕನ್ನಡಿಗರ ಕಲರವ, 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಕನ್ನಡಿಗರ ಉತ್ಸಾಹ, ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಬ್ಬರದ ಭಾಷಣ, ಶ್ರೀಗಳ ಸಾನ್ನಿಧ್ಯ, ಕನ್ನಡದ 26 ಸಂಘಟನೆಗಳು ಒಂದೆಡೆ ಸೇರಿ ವಾಸ್ಕೋ ಸಮೀಪ ಸಾಂಕ್ವಾಳ ಪಂಚಾಯಿತಿ ಮೈದಾನದಲ್ಲಿ ರಾಜ್ಯೋತ್ಸವ ಹಾಗೂ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಅಭೂತಪೂರ್ವ ಯಶಸ್ಸು ಗಳಿಸಿತು.ಭಾನುವಾರ ಮುಸ್ಸಂಜೆಯಿಂದ ತಡ ರಾತ್ರಿ ತನಕ ನಡೆದ ಕಾರ್ಯಕ್ರಮದುದ್ದಕ್ಕೂ ಸಹಸ್ರ ಸಹಸ್ರ ಜನರ ಘೋಷಣೆ, ಕನ್ನಡ ಧ್ವಜದ ಹಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರಿ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕದ 4 ಲಕ್ಷದಷ್ಟು ಜನತೆ ಗೋವಾದಲ್ಲಿದ್ದಾರೆ. ಉತ್ತರ ಕರ್ನಾಟಕದ ಜನತೆ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಷ್ಟೇ ದೊಡ್ಡ ಸಂಖ್ಯೆಯಲ್ಲಿದ್ದರೂ ಗದ್ದಲ, ದೊಂಬಿ ಮಾಡದೆ ಪರಿಶ್ರಮ ಪಟ್ಟು ಇಲ್ಲಿನ ಜನರ ಜೊತೆ ಹೊಂದಾಣಿಕೆಯಿಂದ ಇದ್ದಾರೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದಲೇ ಗೋವಾ ಶಾಂತಿಯುತವಾಗಿದೆ ಎಂದರು.ಬೇರೆ ದೇಶಗಲ್ಲಿ ಭಾರತೀಯರಿಗೆ ತುಂಬ ಗೌರವ ಕೊಡುತ್ತಾರೆ. ಸರಳವಾಗಿ ವೀಸಾ ಸಿಗುತ್ತದೆ. ಆದರೆ ಪಾಕಿಸ್ತಾನದವರು ಎಂದರೆ ವೀಸಾ ಕೊಡಬೇಡಿ ಎಂದು ಅರಬ್ ದೇಶಗಳೇ ಹೇಳುತ್ತಿವೆ ಎಂದರು.
ಮುಂದಿನ ಸಿಎಂ ನಾನೇ ಎಂದು ಘೋಷಣೆ ಕೂಗಿದ್ದೀರಿ. ನಾನು ಸಿಎಂ ಆಗಬೇಕಾದರೆ ಗೋವಾದಲ್ಲಿ ನಡೆಯುವ ಚುನಾವಣೆ ಪ್ರಚಾರಕ್ಕೆ ಬಂದವರಿಗೆ ಕರ್ನಾಟಕದಲ್ಲಿ ಸಿಎಂ ಆಗಿ ಯತ್ನಾಳ ಅವರನ್ನು ಮಾಡುವುದಾದರೆ ಮಾತ್ರ ಮತ ಹಾಕುವುದಾಗಿ ಹೇಳಿ. ಹಾಗೆ ಹೇಳಿದರೆ 2028ಕ್ಕೆ ನಾನೇ ಸಿಎಂ ಆಗುತ್ತೇನೆ ಎಂದರು.ಗೋವಾದಲ್ಲಿ ಕನ್ನಡಭವನಕ್ಕೆ ₹15 ಕೋಟಿ ಕೊಡುವಂತೆ ಕರ್ನಾಟಕ ಸರ್ಕಾರವನ್ನು ವಿಧಾನಸೌಧದಲ್ಲಿ ಆಗ್ರಹಿಸುತ್ತೇನೆ. ನಾನು ಸಿಎಂ ಆದರೆ ₹25 ಕೋಟಿ ಕೊಡುತ್ತೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಮುರಳಿ ಮೋಹನ ಶೆಟ್ಟಿ, ಕನ್ನಡಿಗರನ್ನು ಒಂದೆಡೆ ಸೇರಿಸುವುದು ಸವಾಲಾಗಿತ್ತು. ಆದರೂ ನಿರೀಕ್ಷೆಯಷ್ಟು ಯಶಸ್ಸು ಸಿಕ್ಕಿಲ್ಲ. ಗೋವಾದಲ್ಲಿರುವ ಎಲ್ಲ ಕನ್ನಡಿಗರೂ ಸಂಘಟಿತರಾಗಬೇಕು ಎಂದರು.ಸಮಿತಿ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ, ಈ ಕಾರ್ಯಕ್ರಮ ಅಭೂತಪೂರ್ವವಾಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸೋಣ. ಗೋವಾದಲ್ಲಿ ಕನ್ನಡಿಗರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುವಲ್ಲಿ ಸಹಕರಿಸಿ ಎಂದು ವಿನಂತಿಸಿದರು.
ಗೋವಾದಲ್ಲಿ ಕನ್ನಡ ಭವನಕ್ಕೆ ಜಾಗ ಖರೀದಿಸಲಾಗಿದೆ. ಭವನ ನಿರ್ಮಾಣಕ್ಕೆ ₹15 ಕೋಟಿಗಳನ್ನು ನೀಡುವಂತೆ ಕರ್ನಾಟಕ ಸರ್ಕಾರದ ಮೇಲೆ ಬಸನಗೌಡ ಪಾಟೀಲ ಯತ್ನಾಳ ಒತ್ತಡ ತರಬೇಕೆಂದು ಆಗ್ರಹಿಸಿದರು.ಮುಖ್ಯ ಅತಿಥಿಯಾಗಿದ್ದ ಗೋವಾ ಬಿಜೆಪಿ ಅಧ್ಯಕ್ಷ ದಾಮು ನಾಯ್ಕ, ರಾಜ್ಯೋತ್ಸವ ಸಮಾರಂಭಕ್ಕೆ ಶುಭ ಕೋರಿದರು.
ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಬಾರ್ಕೂರು ಸಂಸ್ಥಾನದ ವಿಶ್ವಸಂತೋಷ ಭಾರತೀ ಶ್ರೀಗಳು, ಯಲ್ಲಾಲಿಂಗೇಶ್ವರ ಮಠದ ಪ್ರಧಾನ ಅರ್ಚಕ ಶ್ರೀ ಕಂಬಳಯ್ಯ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.
ಜಾನಪದ ಗಾಯಕ ಗುರುರಾಜ ಹೊಸಕೋಟೆ, ಸಿದ್ಧಪ್ಪ ಬಿದರಿ, ಬಾಬು ಬೂಸಾರಿ ಅವರ ತಂಡದ ಗಾಯನ ಜನಮೆಚ್ಚುಗೆ ಗಳಿಸಿತು.;Resize=(128,128))
;Resize=(128,128))