ಸಾರಾಂಶ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಲಿ. ಕನ್ನಡ ಭಾಷೆ ಸರಿಯಾಗಿ ಕಲಿತರೆ, ಬೇರೆ ಭಾಷೆಗಳನ್ನೂ ಸರಳವಾಗಿ ಕಲಿಯಬಹುದು. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು ಎಂದು ಕನ್ನಡ ನಾಡು, ನುಡಿ ಚಿಂತನ ಗೋಷ್ಠಿಯಲ್ಲಿ ಪ್ರೊ. ಮೀಸೆ ಅಭಿಮತ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ವಚನ ಹಾಗೂ ದಾಸ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಬೀದರ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಪ್ರೊ. ಉಮಾಕಾಂತ ಮೀಸೆ ಹೇಳಿದರು.ಶ್ರೀ ಕನಕ ಕನ್ನಡ ಸಾಂಸ್ಕೃತಿಕ ಸಂಘದಿಂದ ನಗರದ ಎಕ್ಸಿಸ್ ಬ್ಯಾಂಕ್ ಸಮೀಪದ ಆದರ್ಶ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ನಾಡು, ನುಡಿ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ ಶರಣರು, ದಾಸರ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಮೆಯೂ ಕನ್ನಡ ಸಾಹಿತಿಗಳಿಗೆ ಇದೆ ಎಂದು ತಿಳಿಸಿದರು.
ಕನ್ನಡ ಭಾಷೆ ಸರಿಯಾಗಿ ಕಲಿತರೆ, ಬೇರೆ ಭಾಷೆಗಳನ್ನೂ ಸರಳವಾಗಿ ಕಲಿಯಬಹುದು. ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಬೇಕು ಎಂದು ಹೇಳಿದರು.ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿ, ಕನ್ನಡಿಗರು ಮಾತೃ ಭಾಷೆ ಪ್ರೀತಿ ಮೆರೆಯಬೇಕು ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗಪ್ಪ ಜಾನಕನೋರ ಮಾತನಾಡಿ, ಕನ್ನಡಿಗರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರನ್ನು ವಿಧಾನಸಭೆ ಹಾಗೂ ಸಂಸತ್‌ಗೆ ಆಯ್ಕೆ ಮಾಡುವ ಅಗತ್ಯವಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಕನಕ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿ, ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವುದೇ ಗೋಷ್ಠಿ ಆಯೋಜನೆಯ ಉದ್ದೇಶವಾಗಿದೆ. ಬರುವ ದಿನಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಆದರ್ಶ ಐಟಿಐ ಕಾಲೇಜು ಅಧ್ಯಕ್ಷ ಬಕ್ಕಪ್ಪ ನಾಗೂರೆ, ಪ್ರಾಚಾರ್ಯ ನವೀನ್ ಘುಳೆ, ಕರ್ನಾಟಕ ರಕ್ಷಣಾ ವೇದಿಕೆಯ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ವೀರಶೆಟ್ಟಿ ಗೌಸಪುರ, ಕಾಲೇಜಿನ ಸುನಿತಾ ಬಿರಾದಾರ, ಲಿಂಗದೇವ ಗುತ್ತಿ, ವಿಜಯಕುಮಾರ ಬ್ಯಾಲಹಳ್ಳಿ, ಆಕಾಶ ಇದ್ದರು.