ಕನ್ನಡ ಅಭಿಮಾನ ದಿನಕ್ಕೆ ಸೀಮಿತ ಆಗದಿರಲಿ: ಡಾ.ಬಸವರಾಜು

| Published : Nov 06 2024, 11:51 PM IST

ಕನ್ನಡ ಅಭಿಮಾನ ದಿನಕ್ಕೆ ಸೀಮಿತ ಆಗದಿರಲಿ: ಡಾ.ಬಸವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಎನ್. ಎಸ್. ಎಸ್ ಘಟಕದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕನ್ನಡ ನಾಡು ನುಡಿ ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರ ಮೇಲಿದೆ. ಕನ್ನಡದ ಮೇಲಿನ ಅಭಿಮಾನ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರುವಂತದ್ದಲ್ಲ. ಕನ್ನಡ ನಮ್ಮ ಉಸಿರಾಗಬೇಕು ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೆ. ಬಸವರಾಜು ಹೇಳಿದ್ದಾರೆ.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ 69ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಎನ್. ಎಸ್. ಎಸ್ ಘಟಕದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಹಲವು ಭಾಷೆಗಳೊಂದಿಗೆ ಒಡಮೂಡಿ ಬಂದಂತಹ ಸುಂದರ ಭಾಷೆಯಾಗಿದೆ. ಜಗತ್ತಿನಲ್ಲಿ ಮಾತನಾಡಿದಂತೆ ಬರೆಯುವ, ಬರೆದಂತೆ ಓದುವ , ಓದಿದಂತೆ ಮಾತನಾಡುವ ಭಾಷೆ ಎಂದರೆ ಕನ್ನಡ ಮಾತ್ರ ಎಂದರು.

ಹತ್ತನೇ ಶತಮಾನದಿಂದ ಇಂದಿನವರೆಗೆ ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಸಾಹಿತ್ಯ ಬೆಳೆದು ಬಂದ ಜಗತ್ತಿನ ಶ್ರೇಷ್ಠ ಭಾಷೆ ಕನ್ನಡ ಎಂಬ ಹೆಮ್ಮೆ ನಮ್ಮೆಲ್ಲರಲ್ಲಿ ಇರಬೇಕೆಂದರು.

ರಾಷ್ಟ್ರೀಯ ಸೇವಾ ಯೋಜನೆ ಸಮಾಜದಲ್ಲಿ ನಮ್ಮ ಪಾತ್ರವೇನು, ವ್ಯಕ್ತಿಯಲ್ಲಿ ಇರಬೇಕಾದಂತಹ ಸೇವಾ ಮನೋಭಾವ ಹಾಗೂ ಭವಿಷ್ಯದ ಉತ್ತಮ ಸಮಾಜದ ನಿರ್ಮಾಣದ ಪರಿಕಲ್ಪನೆಯನ್ನು ನಮ್ಮಲ್ಲಿ ತುಂಬುವಂತಹ ಜಾಗೃತಿಯೊಂದಿಗೆ ಸಮಾಜಕ್ಕೆ ಯುವ ಸಮೂಹ ಏನು ಕೊಡುಗೆಯನ್ನು ಕೊಡಬೇಕು ಎಂಬ ಧನಾತ್ಮಕ ಜೀವನ ಶೈಲಿಯನ್ನು ಕಲಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಲ್ಡಾನ ಮಾತನಾಡಿ, ನಾವೆಲ್ಲ ಕನ್ನಡಿಗರು ಎಂಬ ಹೆಮ್ಮೆ ನಮ್ಮಲ್ಲಿ ಇರಬೇಕು. ಕನ್ನಡ ಅಕ್ಷರಗಳ ಸೌಂದರ್ಯ ರಚನೆಯಾದ ರೀತಿ ನಿಜಕ್ಕೂ ಅದ್ಭುತ. ಕನ್ನಡ ಹಲವು ಶತಮಾನಗಳಿಂದ ಸಮೃದ್ಧವಾಗಿ ಬೆಳೆದು ಬಂದಿದೆ. ಸದಾ ಕನ್ನಡವನ್ನು ಬಳಸಿ ಬೆಳೆಸುವ ಕಾರ್ಯವನ್ನು ನಾವೆಲ್ಲರು ಒಗ್ಗೂಡಿ ಮಾಡೋಣ ಎಂದರು.

ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲ ಡಾ. ವೀಣಾ, ಐಕ್ಯೂಎಸಿ ಸಂಚಾಲಕಿ ಪ್ರಿಯ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕ ನಾಗರಾಜು, ಕನ್ನಡ ವಿಭಾಗ ಮುಖ್ಯಸ್ಥ ಸುನಿಲ್ ಕುಮಾರ್ ಇದ್ದರು.