ಸಾರಾಂಶ
ಹುಬ್ಬಳ್ಳಿ: ಎಲ್ಲ ಕಟ್ಟುಪಾಡು ಮುರಿದು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಕನ್ನಡ ಹಬ್ಬ ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಹೇಳಿದರು.
ನಗರದ ಕರ್ನಾಟಕ ವೈದ್ಯಕೀಯ ಕಾಲೇಜ್ ಹಾಗೂ ಸಂಶೋಧನಾ ಸಂಸ್ಥೆ (ಕೆಎಂಸಿಆರ್‌ಐ)ಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕನ್ನಡ ಹಬ್ಬ‘ಲಹರಿ’ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಮಕ್ಕಳನ್ನು 1ರಿಂದ 10 ನೇ ತರಗತಿ ವರೆಗೆ ಕನ್ನಡ ಶಾಲೆಯಲ್ಲಿ ಓದಿಸಬೇಕು.ಅಂದಾಗ ಕನ್ನಡ ಭಾಷೆ ಉಳಿಯುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಿದ್ದಾರೆ ಎಂದರೆ ಅವರು ಕನ್ನಡ ಸರ್ಕಾರಿ ಶಾಲೆಯಲ್ಲಿ ಕಲಿತವರು ಇರುತ್ತಾರೆ.ಹಾಗಂತ ಆಂಗ್ಲ ಭಾಷೆ ಕಲಿಯುವುದು ಬೇಡಾ ಅಂತಲ್ಲ. ಅದು ಜೀವನಕ್ಕೆ ಮಾತ್ರ ಸೀಮಿತವಾಗಬೇಕು. ಹೊರಗಡೆ ನೂರಾರು ಭಾಷೆ ಮಾತನಾಡಿ ಆದರೆ ಕನ್ನಡ ಭಾಷೆ ಗೌರವಿಸಿ ಎಂದರು.
ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ,ಆಂಗ್ಲ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳಲ್ಲಿನ ಕನ್ನಡ ಭಾಷಾಭಿಮಾನ, ಗೌರವ ಎಲ್ಲರಿಗೂ ಮಾದರಿ ಎಂದು ಹೇಳಿದರು.ಇಂತಹ ಕಾರ್ಯಕ್ರಮಗಳು ಪ್ರತಿ ತಿಂಗಳಿಗೊಮ್ಮೆ ನಡೆಯಬೇಕು. ಸಾಹಿತಿ, ಶ್ರೇಷ್ಠ ಕೃತಿ ಸ್ಮರಿಸಬೇಕು. ಕನ್ನಡದ ಇತಿಹಾಸದ ಕುರಿತು, ಇಲ್ಲಿನ ನಿಸರ್ಗ ಸಂಪತ್ತು, ವಿದ್ವಾಂಸರು, ಸಾಧಕರ, ಹೋರಾಟಗಾರರ ಬಗ್ಗೆ ತಿಳಿಸುವ ಕೆಲಸ ಆಗಬೇಕು ಆಗಬೇಕು ಎಂದು ಸಲಹೆ ಮಾಡಿದರು.
ಇದಕ್ಕೂ ಮೊದಲು ಕನ್ನಡ ಹಬ್ಬದ ಅಂಗವಾಗಿ ಕೆಎಂಸಿ ಪ್ರಧಾನ ಪ್ರವೇಶ ದ್ವಾರದಿಂದ ವೇದಿಕೆ ವರೆಗೆ ಸಂಭ್ರಮದ ಮೆರವಣಿಗೆ ನಡೆಯಿತು. ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಮೆರವಣಿಗೆಗೆ ಚಾಲನೆ ನೀಡಿದರು.ಕೆಎಂಸಿಆರ್‌ಐ ಆಸ್ಪತ್ರೆ ನಿರ್ದೇಶಕ ಈಶ್ವರ ಹೊಸಮನಿ, ವೈದ್ಯಕೀಯ ಅಧೀಕ್ಷಕ ಡಾ.ಎಸ್.ರಾಜಶಂಕರ, ಅಂಜನಾ ಡಿ., ಡಾ.ಅನ್ನಪೂರ್ಣಾ, ಕನ್ನಡ ಸಂಘದ ಕಾರ್ಯಾಧ್ಯಕ್ಷ ರಾಜಶೇಖರ ದ್ಯಾಬೇರಿ, ಉಮಾ ಚಿಕ್ಕರಡ್ಡಿ, ಕನ್ನಡ ಸಂಘದ ಮಾರ್ಗದರ್ಶಕ ಡಾ. ಗೋಪಾಲಕೃಷ್ಣ ಮಿತ್ರ, ಡಾ. ಕೆ.ಎಫ್. ಕಮ್ಮಾರ ಹಾಗೂ ಇತರರು ಇದ್ದರು.
ಇಂದಿನ ಕಾರ್ಯಕ್ರಮ: ಆ.2 ರಂದು ಮಧ್ಯಾಹ್ನ 3ರಿಂದ ವಿದ್ಯಾರ್ಥಿಗಳಿಂದ ಜನಪದ ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7ರಿಂದ ಅನಂದ ದೇಶಪಾಂಡೆ ಅವರಿಂದ ಬೇಂದ್ರೆ ಅನುಕರಣೆ ಕಾರ್ಯಕ್ರಮ ಮತ್ತು ಗಾಯಕಿ ಸಾಕ್ಷಿ ಕಲ್ಲೂರ ಹಾಗೂ ಇತರರಿಂದ ಕನ್ನಡ ರಸಮಂಜರಿ ನಡೆಯಲಿದೆ.