ಸಾರಾಂಶ
ಗದಗ: ಬಹಳಷ್ಟು ಹೋರಾಟಗಾರರ ತ್ಯಾಗ, ಬಲಿದಾನದ ಫಲವಾಗಿ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿತು. ಹೆಸರಾಯಿತು ಕರ್ನಾಟಕ. ಆದರೆ ನಮ್ಮ ಜವಾಬ್ದಾರಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದಾಗಿದೆ ಎಂದು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಸಿದ್ಧಲಿಂಗೇಶ ಯು. ಸಜ್ಜನಶೆಟ್ಟರ ತಿಳಿಸಿದರು.
ನಗರದ ಬಸವ ಸಮುದಾಯ ಭವನದಲ್ಲಿ ಬಸವದಳದ ವತಿಯಿಂದ 1670ನೇ ಶರಣ ಸಂಗಮದಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಾಸನಗಳಿಂದ ಹಿಡಿದು ಇಂದಿನ ಕವಿಗಳ ಕೃತಿಗಳಲ್ಲಿ ಉಕ್ತವಾದ ಕನ್ನಡದ ಬಗೆಗಿನ ವಿಷಯಗಳನ್ನು ಅಭಿವ್ಯಕ್ತಿಸುತ್ತಾ, ಕನ್ನಡ ಭಾಷೆಯ ಮೇಲೆ ಬೇರೆ ಬೇರೆ ಭಾಷೆಗಳ ಆಕ್ರಮಣವಾದರೂ ತನ್ನತನ ಉಳಿಸಿಕೊಂಡು ಬಂದಿದೆ. ಪಂಪ, ರನ್ನ, ಪೊನ್ನ, ಜನ್ನ, ಕೇಶಿರಾಜ, ಕವಿಗಳ ಕನ್ನಡದ ಪ್ರೀತಿಯನ್ನು ತಿಳಿಸುತ್ತಾ, ಕನ್ನಡ ಭಾಷೆಯನ್ನು ಜಗತ್ತು ತಿರುಗಿ ನೋಡುವಂತೆ ಮಾಡಿದ್ದು 12ನೇ ಶತಮಾನದ ಬಸವಾದಿ ಶರಣರು ಎಂದರು.
ರಗಳೆ, ಷಟ್ಪದಿ, ಕೀರ್ತನೆ, ಸಾಂಗತ್ಯ, ತ್ರಿಪದಿ, ಜಾನಪದ, ತತ್ವಪದಗಳು, ಕನ್ನಡ ಭಾಷೆಗೆ ಹಿರಿಮೆ- ಗರಿಮೆಗಳನ್ನು ತಂದುಕೊಟ್ಟವು. ವಿಶೇಷವಾಗಿ ಗದಗ ಜಿಲ್ಲೆ ಹಲವಾರು ಕವಿಗಳ ತವರಾಗಿದ್ದು, ಇಲ್ಲಿ ಬಳಸುವ ಶುದ್ಧ ತಿರುಳಗನ್ನಡ, ಯಾವ ಭಾಷೆಗಳ ಪ್ರಭಾವ ಈ ಪ್ರದೇಶದ ಮೇಲಿಲ್ಲ. ಕರ್ನಾಟಕ ಏಕೀಕರಣಕ್ಕಾಗಿ ಅಂದಾನಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡ್ರ, ಪಾಟೀಲ ಪುಟ್ಟಪ್ಪ, ಬಸರಿಗಿಡದ ವೀರಪ್ಪ, ತೋಟಪ್ಪ ನಾರಾಯಣಪೂರ ಹಗಲಿರುಳು ದುಡಿದರು.ಬಸರಿಗಿಡ ವೀರಪ್ಪನವರು ಕರ್ನಾಟಕ ಹೆಸರಿಡುವವರೆಗೂ ನಾನು ನನ್ನ ಗಡ್ಡ ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಹೀಗೆ ಹಲವಾರು ಹೋರಾಟದ ಫಲವಾಗಿ 1973ರ ನ. 1ರಂದು ನಾಡಿಗೆ ಕರ್ನಾಟಕ ಹೆಸರು ಬಂದಿತು ಎಂದರು.ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಮಾತನಾಡಿ, ನಮ್ಮ ಮನೆಯಿಂದಲೇ ಕನ್ನಡ ಭಾಷೆಯನ್ನು ಬಳಸಬೇಕು, ಉಳಿಸಬೇಕು. ಮಕ್ಕಳಿಗೆ ಕನ್ನಡ ಶಬ್ದಗಳನ್ನು ತಿಳಿಸಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ವಿ.ಕೆ. ಕರಿಗೌಡ್ರ ಮಾತನಾಡಿದರು. ಎಸ್.ಎನ್. ಹಕಾರಿ, ಎಸ್.ಎ. ಮುಗದ, ಎಸ್.ಎ. ಸೋಮಗೊಂಡ, ಮಲ್ಲಿಕಾರ್ಜುನ ನಿಂಗೋಜಿ, ಎನ್.ಎಸ್. ಬಡಿಗಣ್ಣವರ, ಎಂ.ಆರ್. ಜಿನಗಾ, ಸಿದ್ದು ಅಂಗಡಿ, ಮಲ್ಲಪ್ಪ ಜಿನಗಾ, ಶಿವಯೋಗಿ ಅಗಡಿ, ಗಂಗಮ್ಮ ಹೂಗಾರ, ಸರೋಜಕ್ಕಾ ಮುಗದ, ಗಿರಿಜಕ್ಕ ಧರ್ಮರಡ್ಡಿ, ಶಾರದಕ್ಕ ಸೋಮಗೊಂಡ, ಮಂಗಳಕ್ಕ ನಾಲ್ವಾಡ, ನಾಗರತ್ನಾ ಅಸುಂಡಿ, ಮಂಗಳಕ್ಕಾ ಕಾಮಣ್ಣವರ, ಪಟ್ಟಣಶೆಟ್ಟಿ, ಗೌರಕ್ಕ ಬಡಿಗಣ್ಣವರ, ರೂಪಾ ಕಾಮಣ್ಣವರ ಮುಂತಾದವರು ಇದ್ದರು. ರೇಣುಕಾ ಕರೇಗೌಡ್ರ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ಟರ ಮಾತನಾಡಿದರು. ಡಾ. ಗಿರಿಜಾ ಹಸಬಿ ಸ್ವಾಗತಿಸಿದರು. ಎಂ.ಬಿ. ಲಿಂಗದಾಳ ನಿರೂಪಿಸಿದರು. ಪ್ರಕಾಶ ಅಸುಂಡಿ ವಂದಿಸಿದರು.
;Resize=(128,128))
;Resize=(128,128))