ಅಳ್ನಾವರ:
ನೂರಾರು ಭಾಷೆಗಳಲ್ಲಿ ಎತ್ತರದ ಸ್ಥಾನ ಅಲಂಕರಿಸಿರುವ ಕನ್ನಡ ಸಂಪದ್ಭರಿತ ಭಾಷೆಗಳಲ್ಲಿ ಒಂದಾಗಿದ್ದು ಬದುಕನ್ನು ಹಸನಗೊಳಿಸುತ್ತದೆ ಎಂದು ಪಪಂ ಸಮುದಾಯ ಸಂಘಟನಾಧಿಕಾರಿ ಮಹಾಂತೇಶ ಬೆಂತೂರ ಹೇಳಿದರು.ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಅನ್ಯ ಭಾಷೆ ಬಳಸುವುದು ತಪ್ಪಲ್ಲ. ಆದರೆ, ಕನ್ನಡ ಗೌರವಿಸುವ ಕೆಲಸವೂ ನಮ್ಮೆಲ್ಲರಿಂದ ಆಗಬೇಕು ಎಂದರು.
ಶತಮಾನಗಳಷ್ಟು ಹಿಂದೆಯೇ ರಚಿತವಾದ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ರಾಜ್ಯ ರೂಪುಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು, ಆಧುನಿಕತೆ ಮತ್ತು ಪರಭಾಷಾ ಆಕರ್ಷಣೆಗೆ ಸಿಲುಕಿ ಕನ್ನಡವನ್ನು ಕೀಳಾಗಿ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ಖಂಡನೀಯ, ಬದುಕು ಕಲಿಸಿದ ಭಾಷೆಯನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸಬೇಕು ಎಂದರು.ಕ್ಷೇತ್ರ ಶಿಕ್ಷಣ ಸಂಪನ್ಮೂಲ ಅಧಿಕಾರಿ ಸುಭಾಸ ತಿಗಡೋಳ್ಳಿ ಮಾತನಾಡಿ, ಕನ್ನಡಿಗರಿಗೂ ಅನೇಕ ಉದ್ಯೋಗಗಳಿದ್ದು ಕನ್ನಡದ ಬಗ್ಗೆ ಆಸಕ್ತಿ ಬೆಳೆಸುವಲ್ಲಿ ಸಾಹಿತ್ಯ ಪರಿಷತ್ ಜತೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಕರೆ ನೀಡಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಅಳ್ನಾವರ ಮತ್ತು ಬೆಣಚಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಮುಖ್ಯಶಿಕ್ಷಕ ಹುದ್ದೆಗೆ ಪದೋನ್ನತಿ ಹೊಂದಿರುವ ಶಿಕ್ಷಕರನ್ನು ಸಾಹಿತ್ಯ ಪರಿಷತ್‌ನಿಂದ ಸನ್ಮಾನಿಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಮೋಲ ಗುಂಜೀಕರ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಗುರುರಾಜ ಸಬನೀಸ ಅಧ್ಯಕ್ಷತೆ ವಹಿಸಿದ್ದರು, ಸಮಾರಂಭದಲ್ಲಿ ಉಪತಹಸೀಲ್ದಾರ್ ಮಲ್ಲಿಕಾರ್ಜುನ ಬಿರಾದಾರ, ಅಳ್ನಾವರ ಹಾಗೂ ಬೆಣಚಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸಂಜಯ ಮಾಳಿ ಮತ್ತು ಎಸ್.ಎಸ್. ಬೆನಕನಾಳ, ಸುಮಾ ಸೊಪ್ಪಿ, ಎಸ್.ಡಿ. ದೇಗಾಂವಿಮಠ, ಶಿವಾಜಿ ಡೊಳ್ಳಿನ, ಗಜಾನನ ಛಲವಾದಿ, ಪ್ರವೀಣ ಪವಾರ, ಏಕನಾಥ ಶಿಂಪಿ, ವಸಂತ ಭಜಂತ್ರಿ, ಏಕನಾಥ ಹೊನಗೇಕರ, ಶಿವಪ್ಪ ಛಲವಾದಿ, ದೇವೇಂದ್ರ ಖಾನಾಪೂರ, ಆಕಾಶ ಜನಕಾಟಿ ಸೇರಿದಂತೆ ಇತರರು ಇದ್ದರು.