ಕನ್ನಡ ಸದಾ ಹೆಮ್ಮೆ ಪಡುವ ಭಾಷೆ: ತಹಶೀಲ್ದಾರ ಅಮರೇಶ

| Published : Nov 13 2025, 01:30 AM IST

ಸಾರಾಂಶ

ಭಾಷೆಯಾಗಿರದೇ ಪ್ರತಿಯೊಬ್ಬರನ್ನು ಭಾವನೆಗಳನ್ನು ಬೆಸೆಯುವ ಮಾತೃ ಭಾಷೆಯಾಗಿದೆ.

ಕೊಟ್ಟೂರು: ಗತಕಾಲದ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಕೇವಲ ಭಾಷೆಯಾಗಿರದೇ ಪ್ರತಿಯೊಬ್ಬರನ್ನು ಭಾವನೆಗಳನ್ನು ಬೆಸೆಯುವ ಮಾತೃ ಭಾಷೆಯಾಗಿದೆ. ಪ್ರತಿಯೊಬ್ಬ ಕನ್ನಡಿಗ ಹೆಮ್ಮ ಪಡುವ ಭಾಷೆ ಇದಾಗಿದೆ ಎಂದು ತಹಶೀಲ್ದಾರ ಅಮರೇಶ ಜಿ.ಕೆ ಹೇಳಿದರು.

ಪಟ್ಟಣದ ಇಂದು ಪದವಿ ಕಾಲೇಜಿನಲ್ಲಿ ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದೊಂದಿಗೆ ಹಮ್ಮಿಕೊಂಡಿದ 70ನೇ ಕನ್ನಡ ರಾಜೋತ್ಸವ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮದಲ್ಲಿಯೇ ಮುದ್ರಣ ಮಾಧ್ಯಮ ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಆದರೆ ದೃಶ್ಯ ಮಾಧ್ಯಮಗಳು ಅನಗತ್ಯವಾಗಿ ಆಂಗ್ಲ ಭಾಷೆಯನ್ನು ಸುಂದರ ಕನ್ನಡ ಭಾಷೆಯೊಂದಿಗೆ ಬಳಸುತ್ತ ಯಾವುದೇ ಬಗೆಯ ಕೊಡುಗೆಯನ್ನು ಇದು ನೀಡುತ್ತಿಲ್ಲದಿರುವುದು ವಿಷಾದಕರ ಸಂಗತಿ ಎಂದರು.

ಹಿರೇಹೇಗ್ಡಾಳ್ ಕನ್ನಡ ಶಿಕ್ಷಕ ಕೆ.ವಿ. ಕೊಟ್ರೇಶಪ್ಪ ಮಾತನಾಡಿ, ಏಕೀಕರಣ ಹೋರಾಟವನ್ನು ಹುಟ್ಟು ಹಾಕಿದ್ದು ಕನ್ನಡ ಸಾಹಿತ್ಯ ಪರಿಷತ್. ಪಂಪ ಕಾವ್ಯದ ಕನ್ನಡ ಸಾಹಿತ್ಯ ಪ್ರತಿಯೊಬ್ಬ ಕನ್ನಡಿಗರಲ್ಲಿ ವಿಶ್ವ ಮಟ್ಟದಲ್ಲಿ ಹೆಮ್ಮೆ ಪಡುವಂತಹದ್ದು. ಕನ್ನಡ ಸಾಹಿತ್ಯ ಪರಿಷತ್ ಭಾಷೆ, ಬೆಳವಣಿಗೆ, ಬಳಕೆಗೆ ಹುಟ್ಟಿದಾಗಿನಿಂದ ಸಾರ್ಥಕ ರೀತಿಯ ಕೆಲಸ ಮಾಡುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರೆಲ್ಲ ಹೆಮ್ಮೆ ಪಡುವ ಸಂಸ್ಥೆಯಾಗಿದೆ ಎಂದರು.

ಪ್ರತಿಯೊಬ್ಬ ಕನ್ನಡಿಗ ಪ್ರತಿ ಹಂತದಲ್ಲಿ ನಾಡು- ನುಡಿ, ಸಂಸ್ಕೃತಿ, ಸಂಸ್ಕಾರವನ್ನು ಮೈಗೊಡಿಸಿಕೊಂಡು ಕನ್ನಡಕ್ಕೆ ಯಾವುದೇ ರೀತಿಯಲ್ಲಿ ಭಂಗ ಬಾರದಂತೆ ಜೋಪಾನದಿಂದ ಕಾಪಾಡಿಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತುಕೊಂಡು ನಾಡದೇವಿಗೆ ನಮ್ಮದೇ ಆದ ಕೊಡುಗೆ ನೀಡಬೇಕು. ಪ್ರತಿ ಹಂತದಲ್ಲಿ ಕನ್ನಡ ನಾಡನ್ನು ಕಟ್ಟಲು ನಮ್ಮ ಹಿರಿಯರು ಬಹು ಬಗೆಯ ಶ್ರಮ ವಹಿಸಿದ್ದಾರೆ. ಇದರ ಸಾರ್ಥಕತೆಗೆ ಎಂದೂ ಧಕ್ಕೆ ಬಾರದಿರಲಿ ಎಂದು ಅವರು ಹೇಳಿದರು.

ಮಾತೃ ಭಾಷೆ ಕನ್ನಡ ಬಗ್ಗೆ ಯಾವುದೇ ಹಂತದಲ್ಲಿ ಕೀಳರಿಮೆ ಇರಬಾರದು. ದೀರ್ಘ ಇತಿಹಾಸ, ಪರಂಪರೆ ನಮ್ಮ ಭಾಷೆಯ ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದರು.

ಉಪನ್ಯಾಸಕ ಸಿ ಬಸವರಾಜ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವರಮನೆ ಕೊಟ್ರೇಶ್ ಮಾತನಾಡಿದರು .

ಇಂದು ಪದವಿ ಕಾಲೇಜ್ ಪ್ರಾಚಾರ್ಯ ಪಿ .ಎ ವಾಗೀಷಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಣನೀಯ ಸಾಧನೆ ತೋರಿರುವ ನಿವೃತ್ತ ಯೋಧ ಶಿಕ್ಷಕ ಅಜ್ಜಪ್ಪ ಪತ್ರಕರ್ತ ಎಂ.ರವಿಕುಮಾರ್, ಚರ್ಮವಾಧ್ಯ ತಯಾರಕ ಗಡ್ಡಿ ಕೊಟ್ರೇಶ್ ಮತ್ತು ರಥ ತಯಾರಕರಾದ ಕೂಡ್ಲಿಗಿ ಕೊಟ್ರೇಶ್, ಮುದ್ದಣ್ಣ ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು. ತಾಲೂಕು ಪದಾಧಿಕಾರಿಗಳಾದ ನಿವೃತ್ತ ಶಿಕ್ಷಕರಾದ ರಾಜಣ್ಣ, ಈಶ್ವರಪ್ಪ ತುರಕಾಣಿ, ಮಹೇಶ್, ಬಿ.ಎಂ. ಗಿರೀಶ್ ಇದ್ದರು.

ಅರವಿಂದ ಬಸಾಪುರ್ ಸ್ವಾಗತಿಸಿದರು. ಬಿ.ಎಂ. ಇಂಪನ ಪ್ರಾರ್ಥಿಸಿದರು. ಉಪನ್ಯಾಸಕ ಮುದ್ದಣ್ಣ ನಿರೂಪಿಸಿದರು. ರಾಮಕೃಷ್ಣ ವಂದಿಸಿದರು.