ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಂಗ್ಲಿಷ್ ಭಾಷೆಯ ಅತಿಯಾದ ವ್ಯಾಮೋಹದಿಂದ ಇಂದು ಕನ್ನಡಕ್ಕೆ ಸವಾಲು ಎದುರಾಗಿದೆ ಎಂದು ಸಾಹಿತಿ ಸದಾಶಿವ ಸೊರಟೂರು ಅಭಿಪ್ರಾಯಪಟ್ಟರು.ಇಲ್ಲಿನ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬಾಪೂಜಿ ನಗರ ಹಾಗೂ ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ವಿಭಾಗ ಹಾಗೂ ಮಲೆನಾಡು ಕಲಾ ತಂಡದ ಸಹಯೋಗದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಭಾಷೆ ನಾಶವಾಗುವುದು ಅಂದರೆ ಅಲ್ಲಿನ ಅಲ್ಲಿನ ಸಂಸ್ಕೃತಿ, ಜನಪದ, ಜನ, ನೆಲ- ಜಲ ನಾಶವಾದಂತೆ. ಭಾಷೆಯನ್ನು ಬಂಡವಾಳವಾಗಿ ನೋಡಬಾರದು. ಇದನ್ನು ಇಂದಿನ ಯುವ ಜನತೆ ಅರ್ಥಮಾಡಿಕೊಳ್ಳಬೇಕು ತಿಳಿಸಿದರು.ಕನ್ನಡ ನಾಡಿನಲ್ಲಿ ತುಳು ನಾಡಿನವರಿಗೆ ಇದ್ದ ಭಾಷಾ ಪ್ರೇಮ ಕನ್ನಡಿಗರಿಗಿಲ್ಲ. ತುಳು ಭಾಷೆಯಲ್ಲಿ ಮಾತನಾಡಿದರೆ ಉದ್ಯೋಗ ಸಿಗುವುದಿಲ್ಲ. ಹಣ, ಆಸ್ತಿ ಸಿಗುವುದಿಲ್ಲ. ಆದರೆ ತುಳುವರು ಅಲ್ಲಿಯ ಜನರೊಂದಿಗೆ ಆ ಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ. ಕನ್ನಡವನ್ನು ಸರಿಯಾಗಿ ಕಲಿಯದಿದ್ದರೆ ಯಾವ ಭಾಷೆಯನ್ನು ಸರಿಯಾಗಿ ಕಲಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇಂದಿನ ವರ್ತಮಾನದಲ್ಲಿ ಹೆಚ್ಚಿನ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಒಂದುಕಡೆ ಭಾಷೆಯಾದರೆ ಇನ್ನೊಂದು ಭಾಷೆಯ ಮೂಲಕ ಬರುವ ಭಾವನೆಗಳನ್ನು ಸರಿಯಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ಸಂಸ್ಕೃತಿ ಎಂಬುದು ಇಲ್ಲ. ಹಲವು ಸಂಸ್ಕೃತಿಗಳ ಮೊತ್ತವೇ ಭಾರತೀಯ ಸಂಸ್ಕೃತಿ. ಹಾಗಾಗಿ ಕನ್ನಡವೆಂದರೆ ಹಲವು ಭಾಷೆಗಳನ್ನು ಒಳಗೊಂಡಿರುವ ಒಂದು ಸಂಸ್ಕೃತಿ ಎಂದು ಹೇಳಿದರು.ಈ ವೇಳೆ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಅಣ್ಣಪ್ಪ ಮಳೀಮಠ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಜಿ.ಚನ್ನಪ್ಪ ಮಾತನಾಡಿದರು. ವೇದಿಕೆಯಲ್ಲಿ ಪ್ರಾಧ್ಯಾಪಕ ಡಾ.ಎಂ.ಎಂ.ಮಂಜುನಾಥ, ಪ್ರೊ.ಶಶಿಧರ, ಡಾ.ವಿದ್ಯಾಮರಿಯ ಜೋಸೆಫ್, ಡಾ.ಸೀಮಾ ಎಸ್.ಆರ್, ಪವಿತ್ರಾ ಕೆಪಿ, ಶ್ವೆತಾ ಇದ್ದರು.