ಜನಸಾಮಾನ್ಯರಿಂದಲೇ ಕನ್ನಡ ಬೆಳೆಯುತ್ತಿದೆ

| Published : Nov 04 2024, 12:16 AM IST

ಜನಸಾಮಾನ್ಯರಿಂದಲೇ ಕನ್ನಡ ಬೆಳೆಯುತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಸಂದರ್ಭದಲ್ಲಿ ತುಂಬಾ ಓದಿದ, ಉನ್ನತ ಸ್ಥಾನದಲ್ಲಿರುವವರಿಂದ ಕನ್ನಡ ಉಳಿಯುತ್ತಿಲ್ಲ. ಕಾರ್ಮಿಕರು, ಆಟೋ ಚಾಲಕರು, ತರಕಾರಿ ಮಾರುವವರು, ಸಣ್ಣಪುಟ್ಟ ಅಂಗಡಿ, ಗ್ರಾಮೀಣರು, ಜನಸಾಮಾನ್ಯರಿಂದಲೇ ಕನ್ನಡ ಉಳಿಯುತ್ತಿದೆ ಎಂದು ಖ್ಯಾತ ಲೇಖಕಿ ಬಿ. ಸಿ. ಶೈಲಾ ನಾಗರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುಪ್ರಸ್ತುತ ಸಂದರ್ಭದಲ್ಲಿ ತುಂಬಾ ಓದಿದ, ಉನ್ನತ ಸ್ಥಾನದಲ್ಲಿರುವವರಿಂದ ಕನ್ನಡ ಉಳಿಯುತ್ತಿಲ್ಲ. ಕಾರ್ಮಿಕರು, ಆಟೋ ಚಾಲಕರು, ತರಕಾರಿ ಮಾರುವವರು, ಸಣ್ಣಪುಟ್ಟ ಅಂಗಡಿ, ಗ್ರಾಮೀಣರು, ಜನಸಾಮಾನ್ಯರಿಂದಲೇ ಕನ್ನಡ ಉಳಿಯುತ್ತಿದೆ ಎಂದು ಖ್ಯಾತ ಲೇಖಕಿ ಬಿ. ಸಿ. ಶೈಲಾ ನಾಗರಾಜ್ ಹೇಳಿದರು.

ನಗರದ ರೈಲು ನಿಲ್ದಾಣದ ಆವರಣದಲ್ಲಿ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನಮ್ಮೆಲ್ಲರಲ್ಲಿ ಕನ್ನಡದ ಬಗ್ಗೆ ನಿತ್ಯ ಜಾಗೃತಿ ಇರಬೇಕಾದುದು ಅತಿ ಮುಖ್ಯ. ಕನ್ನಡದ ಸಂಸ್ಕೃತಿ, ಸಂಸ್ಕಾರ ಎಲ್ಲವೂ ಜನಸಾಮಾನ್ಯರಲ್ಲಿದೆ. ಇದನ್ನೇ ನಮ್ಮ ಬದುಕಿನುದ್ದಕ್ಕೂ ತೆಗೆದುಕೊಂಡು ಹೋಗುವ ಬದ್ಧತೆಯೂ ನಮ್ಮಲ್ಲಿದೆ. ಇದರಿಂದಾನೇ ಕನ್ನಡ ಉಳಿಯುತ್ತಿದೆ. ಪ್ರತಿ ದಿನ, ಪ್ರತಿ ಕ್ಷಣ ಕನ್ನಡ ಉಳಿಸಲು ನಾವೆಲ್ಲ ಮತ್ತಷ್ಟು ಬದ್ಧತೆಯಿಂದ ಕೆಲಸ ಮಾಡಬೇಕಾಗಿದೆ ಎಂದರು. ಖ್ಯಾತ ಲೇಖಕಿ ಬಾ. ಹ. ರಮಾಕುಮಾರಿ ಮಾತನಾಡಿ, ನಾಡಿನಲ್ಲಿ ವಾಸಿಸುತ್ತಿರುವ ಕನ್ನಡೇತರರಿಗೆ ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿಸುವ ಕೆಲಸ ಆಗಬೇಕಿದೆ. ನಮ್ಮ ಸುತ್ತ ನಡೆಯುವ ವ್ಯಾಪಾರ ವ್ಯವಹಾರಗಳ ವಹಿವಾಟಿನಲ್ಲಿ ಕನ್ನಡ ಬಳಕೆಯ ಅನಿವಾರ್ಯತೆ ಸೃಷ್ಟಿಯಾಗದೇ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ನಾಡಿನಲ್ಲೇ ನಾವು ಬಡವರಾಗುವ, ನಿರುದ್ಯೋಗಿಗಳಾಗುವ ಹಾಗೂ ಅನಾಥರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದರು.ಇಲ್ಲಿನ ಕನ್ನಡೇತರರಿಗೆ ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿಸುವಲ್ಲಿ ಆಗುತ್ತಿರುವ ಲೋಪದೋಷಗಳನ್ನು ಗುರುತಿಸಿಕೊಳ್ಳಬೇಕು. ನಾವು ನಿಂತ ನೆಲ ಏಕೆ ಕುಸಿಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದಾಗದಿದ್ದರೆ ನಮ್ಮ ನಾಡಿನಲ್ಲೇ ನಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲಾಗದ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.ಪ್ರಸ್ತುತ ದಿನಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳು, ಐಟಿ ಬಿಟಿ ಹುದ್ದೆಗಳಿಗೆ ಕನ್ನಡ ಭಾಷೆ ಅನಿವಾರ್ಯವಾಗಿ ಉಳಿದಿಲ್ಲ. ಪದವೀಧರರಿಗೂ ಸರಿಯಾದ ಕನ್ನಡ ಗೊತ್ತಿಲ್ಲದ ಪರಿಸ್ಥಿತಿಯಲ್ಲಿದ್ದೇವೆ. ಇದನ್ನು ಸರಿಪಡಿಸುವ ಕೆಲಸ ಪ್ರಾಥಮಿಕ ಶಿಕ್ಷಣದಿಂದಲೇ ಆಗಬೇಕಿದೆ. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಸರಿಯಾದ ಕನ್ನಡ ಕಲಿಸುವ ದೃಢ ಸಂಕಲ್ಪದ ಅಗತ್ಯವಿದೆ. ಅದಾಗದಿದ್ದರೆ ಮುಂದಿನ ವರ್ಷಗಳಲ್ಲಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ಎದುರಾಗಲಿದೆ ಎಂದರು.ಉದಯೋನ್ಮುಖ ಸಾಹಿತಿ ಮಕರಂದ ಮನೋಜ್ ಮಾತನಾಡಿ, ರೈಲು ಪ್ರಯಾಣಿಕರ ವೇದಿಕೆ ನನ್ನಂಥ ಸಾಮಾನ್ಯ ಪ್ರಯಾಣಿಕನಲ್ಲಿನ ಪ್ರತಿಭೆ ಗುರುತಿಸಿ ಅಭಿನಂದಿಸಿದ್ದು ಖುಷಿ ತಂದಿದೆ ಎಂದರು.ನಿಲ್ದಾಣ ವ್ಯವಸ್ಥಾಪಕ ಎ.ಎಲ್. ನಾಗರಾಜ್ ಮಾತನಾಡಿದರು. ಸಂಜನ್ ನಾಗರಾಜ್ ಮತ್ತು ಭಾಗ್ಯಲಕ್ಷ್ಮಿ ನಾಗರಾಜ್ ನಾಡಗೀತೆ, ಕನ್ನಡ ಗೀತೆಗಳನ್ನು ಹಾಡಿದರು. ವೇದಿಕೆ ನಿರ್ದೇಶಕ ನಾಗರಾಜ್ ಸಿ ಸ್ವಾಗತಿಸಿದರು. ಜಂಟಿಕಾರ್ಯದರ್ಶಿಗಳಾದ ಸಗರ ಚಕ್ರವರ್ತಿ ಮತ್ತು ರಘು ಎಂ.ಆರ್. ಮುಖ್ಯ ಅತಿಥಿಗಳು ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ನಿರ್ದೇಶಕ ರಾಮಾಂಜನೇಯ ನಿರೂಪಿಸಿ ಖಜಾಂಚಿ ಆರ್. ಬಾಲಾಜಿ ವಂದಿಸಿದರು.