ಕನ್ನಡ ಕೇವಲ ಭಾಷೆಯಲ್ಲ, ಕನ್ನಡಿಗರ ಬದುಕು: ಸಂಪತ್ ಕುಮಾರ್‌

| Published : Nov 04 2024, 12:20 AM IST

ಕನ್ನಡ ಕೇವಲ ಭಾಷೆಯಲ್ಲ, ಕನ್ನಡಿಗರ ಬದುಕು: ಸಂಪತ್ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಎಂದರೆ ಸ್ನೇಹ, ಸಹನಾ ಗುಣದ ಪ್ರತೀಕವಾಗಿದೆ. ಕನ್ನಡ ಮಾತನಾಡುವುದೇ ಪದ ಕಟ್ಟಿದಂತೆ ಎಂದು ಸಂಪತ್‌ ಕುಮಾರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ಕೇವಲ ಭಾಷೆಯಾಗಿರದೆ ಪ್ರತಿಯೊಬ್ಬ ಕನ್ನಡಿಗನ ಉಸಿರು ಮತ್ತು ಬದುಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಓಂಕಾರ ಸದನದಲ್ಲಿ ಆಯೋಜಿತ ಸಮರ್ಥ ಕನ್ನಡಿಗರು ಸಂಸ್ಥೆಯ ನಿಮ್ಮ ಪ್ರತಿಭೆ - ನಮ್ಮ ವೇದಿಕೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ 68 ವರ್ಷಗಳ ಮೊದಲು ಕರ್ನಾಟಕ ರಾಜ್ಯವನ್ನಾಗಿ ರೂಪಿಸಿದ ಪರಿಣಾಮವೇ ಕನ್ನಡಿಗರು ಒಟ್ಟಾಗಿ ಕನ್ನಡದ ಕಂಪನ್ನು ಪಸರಿಸಲು ಸಾಧ್ಯವಾಗಿದೆ ಎಂದರು.

ಕನ್ನಡ ಎಂದರೆ ಪ್ರೀತಿ, ಸ್ನೇಹ, ಸಹನಾ ಗುಣದ ಪ್ರತೀಕವಾಗಿದ್ದು, ಕನ್ನಡ ಮಾತನಾಡುವುದೇ ಪದ ಕಟ್ಟಿದಂತೆ ಎಂದು ಹೇಳಿದ ಸಂಪತ್ ಕುಮಾರ್, ಕನ್ನಡಪರ ಕಾರ್ಯಕ್ರಮಗಳು ನವಂಬರ್‌ಗೆ ಮಾತ್ರ ಸೀಮಿತವಾಗದೆ ವರ್ಷಪೂರ್ತಿ ಬೇರೆ ಬೇರೆ ಸಂಸ್ಥೆಗಳಿಂದ ಆಯೋಜಿತವಾಗಬೇಕು, ಪ್ರತೀ ದಿನವೂ ಎಲ್ಲೆಡೆ ಕನ್ನಡದ ಹಬ್ಬದ ಸಂಭ್ರಮ ಕಾಣುವಂತಾಗಬೇಕು ಎಂದು ಆಶಿಸಿದರು.

ಸಾಹಿತಿ ಮತ್ತು ವೈದ್ಯ ಡಾ. ಖುಶ್ವಂತ್ ಕೋಳಿಬೈಲು ಮಾತನಾಡಿ, ಸಾಂಸ್ಕೖತಿಕ ಮತ್ತು ಸಾಹಿತ್ಯ ಪರ ಕಾರ್ಯಕ್ರಮಗಳ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ, ಪ್ರತಿಯೊಬ್ಬರಲ್ಲಿಯೂ ಇರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಇಂಥ ಸಾಂಸ್ಕೖತಿಕ ಕಾರ್ಯಕ್ರಮಗಳ ಅಗತ್ಯ ಸಮಾಜಕ್ಕಿದೆ ಎಂದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮೀ ಮಾತನಾಡಿ, ಕಾಲೇಜುಗಳಲ್ಲಿ ಕನ್ನಡ ಭಾಷಾ ಕಲಿಕೆಯಿಂದ ವಿದ್ಯಾರ್ಥಿಗಳು ವಿಮುಖರಾಗುತ್ತಿದ್ದಾರೆ ಕನ್ನಡದ ಬದಲಿಗೆ ಐಚ್ಛಿಕ ವಿಷಯವಾಗಿ ಸಂಸ್ಕೃತ, ಇಂಗ್ಲಿಷ್‌ ಭಾಷೆಯ ಕಲಿಕೆಗೆ ಆದ್ಯತೆ ನೀಡುತ್ತಿದ್ದಾರೆ. ವಿದ್ಯಾರ್ಥಿಯ ಬೌದ್ಧಿಕ ಮಟ್ಟವನ್ನೂ ಮೀರಿದ ಕನ್ನಡ ಪಠ್ಯಗಳಿಂದಾಗಿಯೇ ಈ ರೀತಿಯಾಗಿದೆ, ಪೋಷಕರು, ಶಿಕ್ಷಕರು ಎಷ್ಟೇ ಮನವೊಲಿಸಿದರೂ ವಿದ್ಯಾರ್ಥಿಗಳು ಕನ್ನಡ ಕಲಿಕೆಯ ಆಯ್ಕೆಗೆ ಮುಂದಾಗದಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು.

ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಪಾಪಕ ಲಿಂಗೇಶ್ ಹುಣಸೂರು, ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ ಉಪಸ್ಥಿತರಿದ್ದರು. ಗಿರಿಜಾಮಣಿ ನಿರೂಪಿಸಿದರು. ಸವಿತಾ ರಾಕೇಶ್ ಸ್ವಾಗತಿಸಿದರು. ಚಿತ್ರಾ ಆರ್ಯನ್‌ ವಂದಿಸಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್‌.ಟಿ., ಡಾ.ಸತೀಶ್ ಮತತ್ತಿತರರಿದ್ದರು.

ಛದ್ಮವೇಷ, ಸಮೂಹ ಗಾಯನ, ಸಮೂಹ ನೖತ್ಯ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಕವಿಗೋಷ್ಠಿ ನಡೆಯಿತು. ಬಿ.ಜಿ. ಅನಂತಶಯನ, ಗಿರೀಶ್ ಕಿಗ್ಗಾಲು, ಡಾ. ಸತೀಶ್, ಸಂಗೀತ ರವಿರಾಜ್, ರಂಜಿತ್ ಕವಲಪಾರ, ಕೃಪಾ ದೇವರಾಜ್, ಶ್ವೇತಾ ರವೀಂದ್ರ, ಹೇಮಂತ್ ಪಾರೇರ, ಸಹನಾ ಕಾಂತಬೈಲು, ಹೇಮಂತ್ ಹೊಸೂರು, ಹರಿಣಿ ವಿಜಯ್, ಲೀಲಾ ತೊಡಿಕ್ಕಾನ, ವಿನೋದ್ ಮೂಡಗದ್ದೆ, ಓಂಶ್ರೀ ಧನ್ಯ ಕವನಗಳನ್ನು ವಾಚಿಸಿದರು.