ಸಾರಾಂಶ
ಧಾರವಾಡ:
ರಾಜ ಮನೆತನಗಳ ಸಂದರ್ಭದಲ್ಲಿ ರಾಜರು ಸಂಸ್ಕೃತಕ್ಕೆ ಮಾರು ಹೋದರು. ಆಗ ಆಡಳಿತವು ಸಂಸ್ಕೃತದಲ್ಲಿಯೇ ನಡೆದು ಹೋಯಿತು. ೨೧ನೇ ಶತಮಾನದಲ್ಲಿ ಭಾಷೆಗಳು ಅಳಿಯುತ್ತಿವೆ. ಕನ್ನಡ ಅಳಿವಿನ ಹಾದಿಯಲ್ಲಿ ಇಲ್ಲ, ಉಳಿಯುತ್ತಿದೆ, ಬೆಳೆಯುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಹೇಳಿದರು.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ನುಡಿಗಳ ಉಳಿವಿನ ಅಪಾಯಗಳು ವಿಷಯವಾಗಿ ಮಾತನಾಡಿದ ಅವರು, ಸಾಹಿತ್ಯ ಎನ್ನುವುದು ಜ್ಞಾನ ಸಂಯೋಜನೆಯಾಗಿದೆ. ಕನ್ನಡ ಭಾಷೆಯು ಶ್ರೀಮಂತಿಕೆಯಿಂದ ಕೂಡಿದೆ. ಭಾಷೆಯನ್ನು ಒಂದು ಉದ್ದೇಶದೊಂದಿಗೆ ಬಂದಾಗ ಅದು ಉತ್ತಮ ಸಾಹಿತ್ಯ ರೂಪಗೊಳ್ಳುತ್ತವೆ. ಆಗ ಸಾಹಿತ್ಯ ಕೃತಿಗಳು ಹೆಚ್ಚು ಹೆಚ್ಚು ಬರಲು ಸಾಧ್ಯವಾಗುತ್ತವೆ. ಕನ್ನಡ ಭಾಷೆ ಸಾವಿರಾರು ವರ್ಷಗಳಿಂದ ಬಂದಿದ್ದು, ೨೧ನೇ ಶತಮಾನದಲ್ಲಿ ಸ್ಫೋಟಗೊಳ್ಳುತ್ತಿದೆ. ಸಾಹಿತ್ಯದ ಕುರಿತಾದ ಪುಸ್ತಕಗಳು ಸಾವಿರಾರೂ ಬರುತ್ತಿವೆ. ಆದರೆ, ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ಭಾಷೆ-ಸಂವಹನ-ಕಲಿಕೆ ಮತ್ತು ಶಿಕ್ಷಣ ಮಾಧ್ಯಮ ವಿಷಯವಾಗಿ ಸಾಹಿತಿ ವೆಂಕಟೇಶ ಮಾಚಕನೂರು ಮಾತನಾಡಿ, ದೇಶಿ ಭಾಷೆಗಳ ಅಳಿಗಾಗಿ ಸಂವಿಧಾನ ತಿದ್ದುಪಡಿ ಅವಶ್ಯಕವಾಗಿತ್ತು. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ. ಈಗಲೂ ರಾಜ್ಯ ಸರ್ಕಾರವು ಈ ಕ್ರಮಕ್ಕೆ ಮುಂದಾಗಬೇಕು. ಸಂಸ್ಕೃತಿ, ಭಾಷೆಗಳ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು.ಹಿಂದಿನ ಮುಖ್ಯಮಂತ್ರಿಗಳೊಬ್ಬರು ಏಕಾಏಕಿ ಆಂಗ್ಲ ಮಧ್ಯಮ ಶಾಲೆಗಳನ್ನು ಪ್ರಾರಂಭಿಸಿದರು. ಆದರೆ, ಈಗ ಅಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆ ಶಾಲೆಗಳ ಅವಶ್ಯಕತೆ ಇರಲಿಲ್ಲ. ಆಂಗ್ಲ ಮಾಧ್ಯಮ ಕಲಿಕೆ ಕಂಠಕ ಪಾಲಕರಿಗೆ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಭಾಷಾ ಮಾಧ್ಯಮದ ಕುರಿತು ಪಾಲಕರಿಗೆ ಹಾಗೂ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ದುಷ್ಯಂತ ನಾಡಗೌಡ, ವೈಚಾರಿಕತೆ ಹಾಗೂ ಭಾಷೆ ಎರಡು ಕೂಡಿಕೊಂಡು ಬೆಳೆದವು. ವೈಚಾರಿಕತೆ ಭಾಷೆ, ಅಕ್ಷರ ಇವೆಲ್ಲವೂ ಬೆಳೆಯಬೇಕು. ಅಳಿವಿನ ಅಂತ್ಯದಲ್ಲಿರುವ ಭಾಷೆಗಳಲ್ಲಿ ಕನ್ನಡ ಇಲ್ಲ ಎನ್ನುವುದು ಖುಷಿ ವಿಚಾರ ಎಂದರು.ನಿಡವಣಿ ಮಹಾವಿದ್ಯಾಲಯ ಅಧ್ಯಕ್ಷ ಪ್ರಭಾ ನಿಡವಣಿ ಮಾತನಾಡಿದರು. ಡಿಡಿಪಿಐ ಪ್ರೊ. ಕೆ.ಪಿ. ಸುರೇಶ, ಗುರುಕುಲ ಶಿಕ್ಷಣ ಸಂಸ್ಥೆ ನಿರ್ದೇಶಕ ಎನ್.ಎಂ. ಪಾಟೀಲ ಇದ್ದರು. ಗುರುರಾಜ ಸಬನಿಸ್ ಸ್ವಾಗತಿಸಿದರು. ಪೂರ್ಣಿಮಾ ಮುತ್ನಾಳ ನಿರೂಪಿಸಿದರು. ಏಕನಾಥ ಶಿಂಪಿ ವಂದಿಸಿದರು.