ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮೂರು ಭಾಷೆಗಳ ಸಂಗಮದಲ್ಲಿರುವ ತಾಲೂಕಿನಲ್ಲಿ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗಿಲ್ಲ. ಆದರೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಭಾಷೆ ದಿನೇದಿನೆ ನಶಿಸಿ ಹೋಗುವಂತಹ ವಾತಾವರಣ ನಿರ್ಮಾಣವಾಗಿರುವುದು ವಿಷಾದನೀಯ ಸಂಗತಿ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎಸೆಸೆಲ್ಸಿ ಮತ್ತು ಪಿಯುಸಿ ನಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವ್ಯವಹಾರಕ್ಕೆ ಕನ್ನಡ ಬಳಸಿ
ಹಿಂದೆ ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಹೆಚ್ಚು ತಮಿಳು ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದವು. ಆಗ ಹೋರಾಟಗಳನ್ನು ಮಾಡಿದ ಹಿನ್ನೆಲೆ ಇಂದು ಕೆಜಿಎಫ್ ಮತ್ತು ಬಂಗಾರಪೇಟೆಯಲ್ಲಿ ಕನ್ನಡವನ್ನು ಉಳಿಸಲು ಸಾಧ್ಯವಾಯಿತು. ಮಕ್ಕಳು ಮನೆಗಳಲ್ಲಿ ತಮಗೆ ಇಷ್ಟ ಬಂದ ಭಾಷೆಯನ್ನು ಮಾತಾಡಿ, ಆದರೆ ವ್ಯವಹಾರಿಕವಾಗಿ, ಓದಲು ಬರೆಯಲು ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಎಂದರು.ಕನ್ನಡ ಗೊತ್ತಿದ್ದರೆ ಮಾತ್ರ ರಾಜ್ಯದಲ್ಲಿ ಉಳಿಗಾಲ ಇಲ್ಲದಿದ್ದರೆ ಇಲ್ಲ ಎಂಬ ವಾತಾವರಣ ನಿರ್ಮಾಣ ಮಾಡಬೇಕು. ಆಗ ಮಾತ್ರ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯ. ಇತ್ತೀಚಿಗೆ ಬೆಂಗಳೂರಿನಲ್ಲಿ ಕನ್ನಡವನ್ನೇ ಮರೆತು ಹೋಗುತ್ತಿದ್ದಾರೆ. ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಕನ್ನಡವೇ ಇಲ್ಲದಂತಾಗಿದೆ. ಎಲ್ಲರೂ ಬೇರೆ ಬೇರೆ ಭಾಷೆಗಳನ್ನು ಬೆಳೆಸುತ್ತಿದ್ದಾರೆ. ಆದರೆ ಗಡಿ ಭಾಗಗಳಲ್ಲಿ ಕನ್ನಡಕ್ಕೆ ಧಕ್ಕೆಯಾಗದಂತೆ ಬೆಳೆಸಬೇಕು, ಅನ್ಯರಿಗೂ ಕನ್ನಡ ವ್ಯಾಮೋಹ ಮೂಡಿಸಬೇಕೆಂದರು.
ನಾಡಿನ ಇತಿಹಾಸದ ಅರಿವಿಲ್ಲಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಕನ್ನಡಿಗರು ನವೆಂಬರ್ ತಿಂಗಳಿನ ಕನ್ನಡಿಗರಾಗದೆ ವರ್ಷವಿಡೀ ಕನ್ನಡಿಗಾರಬೇಕೆಂದಲ್ಲದೆ ಈಗಿನ ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಇಲ್ಲದಂತಾಗಿದೆ. ಅವರಿಗೆ ಸಾಹಿತ್ಯ ಪರಿಷತ್ ಜಾಗೃತಿ ಮೂಡಿಸುವ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು. ಪತ್ರಕರ್ತರಿಗೆ ಅವಕಾಶ ಇಲ್ಲ
ತಾಲೂಕು ಕಸಾಪ ಕಳೆದ 3ವರ್ಷಗಳಿಂದ ಯಾವುದೇ ಕನ್ನಡ ಭಾಷೆ ಉಳಿಸಿ ಬೆಳೆಸುವ ಬಗ್ಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಸಂಪೂರ್ಣವಾಗಿ ನಿಷ್ಕ್ರೀಯವಾಗಿದೆ ಎಂಬ ಟೀಕೆ ಸದಸ್ಯರಿಂದಲೇ ಕೇಳಿಬಂದರೆ, ಮತ್ತೊಂದೆಡೆ ಕಸಾಪ ಅಧ್ಯಕ್ಷರು ಪತ್ರಕರ್ತರನ್ನು ದೂರವಿಟ್ಟು ಇಂದಿನ ಕಾರ್ಯಕ್ರಮ ಮಾಡಿದ್ದಕ್ಕೂ ವೇದಿಕೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗೋವಿಂದ, ಕಸಾಪ ಅಧ್ಯಕ್ಷ ಸಂಜೀವಪ್ಪ,ಸಿಆರ್‌ಪಿ ಶಶಿಕಲಾ, ಪ್ರಾಂಶುಪಾಲರಾದ ಸುಬ್ರಹ್ಮಣ್ಯ, ಮುರಳಿ, ಉಪ ಪ್ರಾಂಶುಪಾಲ ಹನುಮಂತ ವಗ್ಗರ್,ಜ್ಯೋತಿ, ಸುಜಾತಾ,ಮಂಜುನಾಥ್, ರಾಮಕೃಷ್ಣಪ್ಪ, ಆಂಜನೇಯ ಗೌಡ ಇದ್ದರು.