ಕನ್ನಡ ನಮ್ಮ ಉಸಿರಾದಾಗ ಭಾಷೆ ಬೆಳವಣಿಗೆ

| Published : Nov 02 2025, 02:00 AM IST

ಸಾರಾಂಶ

ಕನ್ನಡ ಕೇವಲ ನಮ್ಮ ಭಾಷೆಯಾಗಿರದೆ ನಮ್ಮ ಉಸಿರಾದಾಗ ಮಾತ್ರ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಹೊಸದುರ್ಗ: ಕನ್ನಡ ಕೇವಲ ನಮ್ಮ ಭಾಷೆಯಾಗಿರದೆ ನಮ್ಮ ಉಸಿರಾದಾಗ ಮಾತ್ರ ಭಾಷೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಕನ್ನಡ ಶಾಲೆಗಳನ್ನು ಬದಿಗೊತ್ತಿ, ಇಂಗ್ಲಿಷ್ ಶಾಲೆಗಳ ಬೆಳವಣಿಗೆಗೆ ಸಹಕಾರ ನೀಡಲಾಗುತ್ತಿದೆ. ಕನ್ನಡದ ಮಾತು, ಭಾಷೆಯ ಮಹತ್ವ ವೇದಿಕೆಗೆ ಸೀಮಿತವಾಗುತ್ತಿರುವುದು ಬೇಸರ ತರಿಸಿದೆ. ದೇಶದ ಸಂಸ್ಕೃತಿ, ಹಿರಿಮೆ, ಪರಂಪರೆ ದೊಡ್ಡದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ದೊಡ್ಡ ಅಸ್ತಿತ್ವವಿದೆ. ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಅನ್ಯ ರಾಜ್ಯಗಳಿಂದ ಬಂದಂತಹ ನಾಗರಿಕರಿಗೆ ನಮ್ಮ ನೆಲದ ಭಾಷೆಯ ಮಹತ್ವವನ್ನು ತಿಳಿಸಬೇಕಿದೆ ಎಂದರು.

ನಾಡು, ನುಡಿ, ನೆಲದ ಸಂದರ್ಭದಲ್ಲಿ ಕನ್ನಡಿಗರು ರಾಜಕೀಯ ಬೆರಸಬಾರದು. ಕನ್ನಡಕ್ಕೆ ಅನ್ಯಾಯವಾಗುವಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್‌ ಭಾಷೆ ಅನಿವಾರ್ಯವಾದರೂ ತಮ್ಮ ಮಾತೃ ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ವಾತ್ಸಲ್ಯ ಇರಬೇಕು. ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದವರು ಕನ್ನಡದ ಸಾಹಿತಿಗಳು ಎಂಬುದನ್ನು ತಿಳಿಯಬೇಕು ಎಂದರು.

ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ತಿರುಪತಿ ಪಾಟೀಲ್, ಇತಿಹಾಸವಿರುವ ಕನ್ನಡವನ್ನು ಮತ್ತಷ್ಟು ಅತ್ಯುನ್ನತಮಟ್ಟಕ್ಕೆ ಬೆಳೆಸುವ ಮೂಲಕ ಕನ್ನಡ ನಾಡು-ನುಡಿಯ ಮಹತ್ವ ಸಾರೋಣ. ಜಾತಿ, ಧರ್ಮ ಭೇದವಿಲ್ಲದೇ ನಾಡ ಧ್ವಜವನ್ನು ಸ್ವೀಕರಿಸಿದ್ದೇವೆ. ಪ್ರಸ್ತುತ ಕನ್ನಡಿಗರು ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮುನ್ನೆಲೆಗೆ ಬರಬೇಕು. ಕನ್ನಡ ಭಾಷೆ ಮತ್ತು ಇಲ್ಲಿನ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಗಜೇಂದ್ರ, ಮುಖ್ಯಾಧಿಕಾರಿ ನಾಗಭೂಷಣ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್‌ಕುಮಾರ್, ಪೊಲೀಸ್ ನಿರೀಕ್ಷಕ ಕೆ.ಟಿ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೊಸಿನ್ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಶಿಕ್ಷಕರು, ಸಾರ್ವಜನಿಕರು ಮತ್ತು ನೂರಾರು ಮಕ್ಕಳಿದ್ದರು.

ಹೊಸದುರ್ಗ ತಾಲೂಕಿಗೆ ಭದ್ರಾ ನೀರು ಹರಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದೀರಿ. ಅದನ್ನು ಅರಿತು ಕೆಲಸ ಮಾಡುವ ಹೊಣೆಗಾರಿಕೆ ನನ್ನ ಮೇಲಿದೆ. ಮುಂಬರುವ ಆಗಸ್ಟ್ ತಿಂಗಳಿನಲ್ಲಿ ತಾಲೂಕಿಗೆ ಭದ್ರಾ ನೀರು ಹರಿದು ಬರಲಿದೆ. ಚಿತ್ರದುರ್ಗ ಜಿಲ್ಲೆಗೆ ಹರಿದು ಬರುವ ನೀರಿಗೆ ಹೊಸದುರ್ಗ ತಾಲೂಕಿನವರೇ ಮೊದಲ ಫಲಾನುಭವಿಗಳು. ಹೊಸದುರ್ಗ ನಗರ ಸೇರಿದಂತೆ ತಾಲೂಕಿನ 346 ಹಳ್ಳಿಗಳಿಗೂ ನೀರು ಕೊಡುವ ಕೆಲಸ ಮಾಡುತ್ತೇನೆ

- ಬಿ.ಜಿ.ಗೋವಿಂದಪ್ಪ, ಶಾಸಕ