ಸಾರಾಂಶ
ಗುರುಮಠಕಲ್ ಸಮೀಪದ ಸೈದಾಪುರ ಪಟ್ಟಣದಲ್ಲಿ ಕರ್ನಾಟಕ ಸಂಭ್ರಮ -50ರ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಗೆ ಗಣ್ಯರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಕನ್ನಡ ನಮ್ಮೆಲ್ಲರ ತಾಯಿ ಭಾಷೆ, ಅದು ಹುಟ್ಟಿನಿಂದಲೇ ಬರುವಂತದ್ದಾಗಿದೆ. ಅದು ಹಿರಿಯರ ಘೋಷವಾಕ್ಯದಂತೆ, ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ ಎಂಬಂತೆ ನಮ್ಮಲ್ಲಿ ಸದಾ ಅನುರಣಿಸಬೇಕು ಎಂದು ತಹಸೀಲ್ದಾರ್ ಸುರೇಶ್ ಅಂಕಲಗಿ ಹೇಳಿದರು.ಸಮೀಪದ ಸೈದಾಪುರ ಪಟ್ಟಣದಲ್ಲಿ ನಡೆದ ಕರ್ನಾಟಕ ಸಂಭ್ರಮ-50ರ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಕನ್ನಡ ಮಾತೆ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯಾವರ್ಧಕ ಸಂಸ್ಥೆಯಿಂದ ಕನ್ನಡ ರಥೋತ್ಸವ ಮೆರವಣಿಗೆ ಆರಂಭಿಸಿ ಬಸವೇಶ್ವರ ವೃತ್ತ, ಕನಕ ವೃತ್ತ, ಅಂಬಿಗರ ಚೌಡಯ್ಯ ವೃತ್ತದ ಮೂಲಕ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಬಹು ವಿಜೃಂಭಣೆಯಿಂದ ಮೆರವಣಿಗೆಯ ಉತ್ಸಾಹದಲ್ಲಿ ಸಾಗಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ರಥೋತ್ಸವಕ್ಕೆ ಇಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ಕನ್ನಡಾಭಿಮಾನಿಗಳು ಅದ್ಧೂರಿ ಸ್ವಾಗತ ಕೋರುವ ಮೂಲಕ ಕನ್ನಡ ನಾಡಿನ ಮಹತ್ವ ಹೆಚ್ಚಾಗುವಂತೆ ಮಾಡಿರುವುದು ವಿಶೇಷತೆಯನ್ನುಂಟು ಮಾಡುವಂತಿತ್ತು ಎಂದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕವಿತಾ ಮಿರಿಯಾಲ, ವಿದ್ಯಾ ವರ್ಧಕ ಸಂಸ್ಥೆ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಕಸಾಪ ವಲಯಾಧ್ಯಕ್ಷ ಮಹಿಪಾಲರೆಡ್ಡಿ ದುಪ್ಪಲ್ಲಿ, ಉಪ ತಹಸೀಲ್ದಾರ್ ದಸ್ತಗಿರಿ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ, ಶೀಲಾ, ಕೆ.ಬಿ ಗೋವರ್ಧನ, ಮುಕುಂದ ಕುಮಾರ ಅಲಿಝಾರ್, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲರು ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ. ಗುರುಪ್ರಸಾದ ಸೇರಿದಂತೆ ಇತರರಿದ್ದರು.