ಹೊಸ ಸಾಧ್ಯತೆಗೆ ತೆರೆದುಕೊಂಡ ಕನ್ನಡ ಪತ್ರಿಕೋದ್ಯಮ: ವಿರಾಟ್ ಪದ್ಮನಾಭ

| Published : Jan 15 2024, 01:46 AM IST

ಹೊಸ ಸಾಧ್ಯತೆಗೆ ತೆರೆದುಕೊಂಡ ಕನ್ನಡ ಪತ್ರಿಕೋದ್ಯಮ: ವಿರಾಟ್ ಪದ್ಮನಾಭ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ, ಪ್ರಜಾವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಪ್ರಯೋಗಗಳಿಗೆ ನಾಂದಿ ಹಾಡಿದವು.

ಬಳ್ಳಾರಿ: ಪುಸ್ತಕ ಸಂಸ್ಕೃತಿಯ ವಿಸ್ತರಣೆಯ ಸಾಧ್ಯತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕನ್ನಡ ಪತ್ರಿಕಾರಂಗ ಅನೇಕ ಪ್ರಯೋಗಗಳನ್ನು ಮಾಡಿದೆ. ಓದುಗನ ಭಾಷಾ ಬೆಳವಣಿಗೆ ನೆಲೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆ ನೀಡಿದೆ ಎಂದು ಉಜಿರೆಯ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ತಿಳಿಸಿದರು.

ನಗರದ ಸರಳಾದೇವಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜರುಗಿದ ಮುದ್ರಣ ಮಾಧ್ಯಮ; ಬಹುಮುಖಿ ಆಯಾಮಗಳು ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ "ಜೀವಪರ ಅಭಿವ್ಯಕ್ತಿ ಮತ್ತು ಪ್ರಯೋಗಶೀಲತೆ " ಕುರಿತು ಮಾತನಾಡಿದರು.

ಕನ್ನಡಪ್ರಭ, ಪ್ರಜಾವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಪ್ರಯೋಗಗಳಿಗೆ ನಾಂದಿ ಹಾಡಿದವು. ಸಾಹಿತ್ಯ, ಸಂಸ್ಕೃತಿ ಗುರುತಾಗಿ ಭಿನ್ನವಾದ ನಿಲುವುಗಳನ್ನು ತೆಗೆದುಕೊಂಡವು. ಹೊಸ ಸಾಧ್ಯತೆಗಳಿಗೆ ಪತ್ರಿಕೋದ್ಯಮ ತೆರೆದುಕೊಂಡ ಪರಿಣಾಮವಾಗಿಯೇ ಬಹುದೊಡ್ಡ ಸಂಖ್ಯೆಯ ಓದುಗರ ಸೃಷ್ಟಿಗೆ ಆಸ್ಪದವಾಯಿತು. ಮುದ್ರಣ ಮಾಧ್ಯಮಕ್ಕಿರುವ ಅಗಾಧ ಶಕ್ತಿಯ ಬಗ್ಗೆ ಹೇಳುವುದಾದರೆ ಹೊಸ ಮಾಧ್ಯಮಗಳಲ್ಲಿ ಮಿಂಚುತ್ತಿರುವರೆಲ್ಲರೂ ಮುದ್ರಣ ಮಾಧ್ಯಮದಿಂದಲೇ ಹೋದವರು ಎಂದು ವಿರಾಟ್ ಪದ್ಮನಾಭ ತಿಳಿಸಿದರು.

ಸಮಾರಂಭಕ್ಕೆ ಚಾಲನೆ ನೀಡಿದ ಶಿವಮೊಗ್ಗದ ಹಿರಿಯ ಪತ್ರಕರ್ತ ಪ್ರಕಾಶ ಕುಗ್ವೆ ಅವರು, ಮುದ್ರಣ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟು, ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪತ್ರಿಕೋದ್ಯಮದ ಕೊಡುಗೆ, ಇತ್ತೀಚೆಗೆ ಹೆಚ್ಚುತ್ತಿರುವ ಜಾತಿ- ಧರ್ಮ, ರಾಗ- ದ್ವೇಷಗಳ ವಿಜೃಂಭಣೆ, ಬಹುತ್ವದ ಈ ದೇಶದಲ್ಲಿ ಮೂಲಭೂತವಾದದ ಅಪಾಯಗಳು ಕುರಿತು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯ- ಸಂಸ್ಕೃತಿ ಮತ್ತು ಸೃಜನಶೀಲತೆ ಕುರಿತು ಮಾತನಾಡಿದ ಶಿವಮೊಗ್ಗದ ಲೇಖಕ ಹಾಗೂ ಪತ್ರಕರ್ತ ಪಿ.ಎಂ. ವೀರೇಂದ್ರ ಅವರು, ನಾಡಿನ ಅನೇಕ ರಾಜಕೀಯ ನಾಯಕರು ಹುಟ್ಟು ಹಾಕಿದ ರಾಜಕೀಯ ಸಂಸ್ಕೃತಿಯ ಕುರಿತು ಮೆಲುಕು ಹಾಕಿದರಲ್ಲದೆ, ಬಳ್ಳಾರಿ ಜಿಲ್ಲೆಯ ಎಂ.ವೈ. ಘೋರ್ಪಡೆ, ಎಂ.ಪಿ. ಪ್ರಕಾಶ್ ಸೇರಿದಂತೆ ಶಾಂತವೇರಿ ಗೋಪಾಲಗೌಡರು, ಪ್ರೊ. ನಂಜುಂಡಸ್ವಾಮಿ, ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಚಿಂತಕರು ಹಾಗೂ ಹೋರಾಟಗಾರರಿಗೆ ಮುದ್ರಣ ಮಾಧ್ಯಮ ಹೆಚ್ಚು ಇಂಬು ನೀಡಿ, ಪ್ರೋತ್ಸಾಹಿಸಿದವು ಎಂದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಿಂಗಪ್ಪ, ಎಂ.ಎನ್‌. ಪ್ರವೀಣ್‌ ಕುಮಾರ ಹಾಗೂ ಬಿ. ರಾಮಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.