ಸಂಚಾರಿ ಪೊಲೀಸರಿಂದ ಪರಭಾಷಿಕರಿಗೆ ಕನ್ನಡ ಕಲಿಸೋ ಅಭಿಯಾನ

| Published : Nov 02 2024, 01:21 AM IST

ಸಾರಾಂಶ

ರಾಜಧಾನಿಯಲ್ಲಿ ಪರಭಾಷಿಕರಿಗೆ ಕನ್ನಡ ನುಡಿ ಕಲಿಸುವ ವಿನೂತನ ಅಭಿಯಾನವನ್ನು ಆಟೋ ಚಾಲಕರ ಸಹಕಾರದಲ್ಲಿ ಸಂಚಾರ ವಿಭಾಗದ ಪೊಲೀಸರು ಕನ್ನಡದ ಹಬ್ಬದಂದು ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಪರಭಾಷಿಕರಿಗೆ ಕನ್ನಡ ನುಡಿ ಕಲಿಸುವ ವಿನೂತನ ಅಭಿಯಾನವನ್ನು ಆಟೋ ಚಾಲಕರ ಸಹಕಾರದಲ್ಲಿ ಸಂಚಾರ ವಿಭಾಗದ ಪೊಲೀಸರು ಕನ್ನಡದ ಹಬ್ಬದಂದು ಚಾಲನೆ ನೀಡಿದ್ದಾರೆ.

ಆಟೋಗಳಿಗೆ ಪ್ರದರ್ಶನ ಫಲಕಗಳನ್ನು ವಿತರಿಸಿರುವ ಪೊಲೀಸರು, ಆ ಫಲಕಗಳಲ್ಲಿ ಕನ್ನಡ ಪದಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಬರೆದಿದ್ದಾರೆ. ಇದರಿಂದ ಚಾಲಕ ಮತ್ತು ಪರ ಭಾಷಿಕ ಪ್ರಯಾಣಿಕರ ನಡುವೆ ಸಂವಹನ ಸುಲಭವಾಗಿಸಿದ್ದಾರೆ. ಅಲ್ಲದೆ ಈ ಮೂಲಕ ಪರ ಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಪೊಲೀಸರು ಮಾಡಿದ್ದಾರೆ.

‘ಕನ್ನಡ ರಾಜ್ಯೋತ್ಸವದಂದು, ಬೆಂಗಳೂರು ಸಂಚಾರ ಪೋಲಿಸ್ ವತಿಯಿಂದ ಪರಭಾಷಿಕರಿಗೆ ಕನ್ನಡ ಭಾಷೆಯನ್ನು ಕಲಿಸುವ ಒಂದು ಅಳಿಲು ಪ್ರಯತ್ನ. ಆಟೋ ಕನ್ನಡಿಗ ಸಹಯೋಗದಲ್ಲಿ ಅಭಿಯಾನ. ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ !!’ ಎಂದು ಅಭಿಪ್ರಾಯವನ್ನು ನಗರ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

‘ಕನ್ನಡ ಕಲಿಸಿ, ಕನ್ನಡ ಬಳಸಿ’ ಎಂಬ ಧ್ಯೇಯ ಘೋಷದಡಿ ಪರಭಾಷಿಕರಿಗೆ ಕನ್ನಡ ಕಲಿಸುವ ಅಭಿಯಾನವನ್ನು ಆಟೋ ಚಾಲಕರ ಸಹಭಾಗಿತ್ವದಲ್ಲಿ ಪೊಲೀಸರು ಆರಂಭಿಸಿದ್ದಾರೆ. ನಗರದ ಪ್ರತಿ ಸಂಚಾರ ಠಾಣೆಗಳ ಪೊಲೀಸರು ಆಟೋ ಚಾಲಕರಿಗೆ ಪ್ರದರ್ಶನ ಫಲಕಳನ್ನು ವಿತರಿಸಿದ್ದಾರೆ. ಇವುಗಳನ್ನು ಮೀಟರ್‌ ಬಾಕ್ಸ್ ಬಳಿ ಚಾಲಕರು ಹಾಕಿಕೊಳ್ಳಬೇಕು. ಅಲ್ಲದೆ ಕ್ಯೂಆರ್ ಕೋಡ್ ಸಹ ನೀಡಲಾಗಿದ್ದು, ಮೊಬೈಲ್‌ಗಳಲ್ಲಿ ಕ್ಯೂ ಆರ್ ಕೋಡ್‌ ಬಳಸಿ ಸಂವಹನ ನಡೆಸಬಹುದಾಗಿದೆ. ಹಾಗೆಯೇ ಆಟೋ ಚಾಲಕರಿಗೂ ಸಹ ಅನ್ಯ ಭಾಷಿಕ ಪ್ರಯಾಣಿಕರ ಜತೆ ಸಂವಹನ ನಡೆಸುವುದನ್ನು ಕೂಡ ಪೊಲೀಸರು ಹೇಳಿಕೊಟ್ಟಿದ್ದಾರೆ. ಇನ್ನು ಸಂಚಾರ ಪೊಲೀಸರ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.