ಕನ್ನಡ ಭಾಷೆ ಎಂದಿಗೂ ನಶಿಸಿ ಹೋಗಲು ಸಾಧ್ಯವಿಲ್ಲ

| Published : Jan 28 2025, 12:49 AM IST

ಸಾರಾಂಶ

ಚಳ್ಳಕೆರೆ ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಕನ್ನಡ ಕಲಾಕುಸುಮಗಳು ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ, ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ:

ನಾಡಿನ ಆಡಳಿತ ಭಾಷೆಯಾದ ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ವಿದೇಶಿಗರು ನಮ್ಮನಾಳಿದರೂ ಸಹ ನಮ್ಮ ಭಾಷೆಗೆ ಯಾವುದೇ ಅಪಾಯ ಉಂಟಾಗಲಿಲ್ಲ. 1982ರಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯಭಾಷಿಗರು ದಬ್ಬಾಳಿಕೆ ನಡೆಸುವ ಸಂದರ್ಭದಲ್ಲಿ ಗೋಕಾಕ್ ಚಳುವಳಿಯ ಮೂಲಕ ಇಡೀ ರಾಜ್ಯ ಕನ್ನಡಪರವಾಗಿ ನಿಂತು ಕನ್ನಡ ರಕ್ಷಿಸಿತು. ಕನ್ನಡ ಭಾಷೆ ಎಂದಿಗೂ ನಶಿಸಿ ಹೋಗಲು ಸಾಧ್ಯವಿಲ್ಲವೆಂದು ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಸೋಮವಾರ ಸಂಜೆ ನಗರದ ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಕಲಾಕುಸುಮಗಳು-2024-25 ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಿಕ್ಸೂಚಿ ಭಾಷಣ ಮಾಡಿದರು. ಈ ಹಿಂದೆ ರಾಜ್ಯಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ 75 ನಾಟಕ ಕಂಪನಿಗಳು ದಿವಾಳಿ ಹಚ್ಚಿನಲ್ಲಿದ್ದವು. ಇಡೀ ರಂಗಭೂಮಿ ಆರ್ಥಿಕ ಸಂಕಷ್ಟದಿಂದ ನಲುಗಿದ ಸಂದರ್ಭದಲ್ಲಿ ಪ್ರತಿವರ್ಷ ಪ್ರತಿ ಕಂಪನಿಗೆ 5 ಲಕ್ಷ ರು.ಆರ್ಥಿಕ ನೆರವು ನೀಡಿ ಅವುಗಳನ್ನು ರಕ್ಷಿಸಲಾಯಿತು. ಕನ್ನಡವನ್ನು ಉಳಿಸಿಬೆಳೆಸುವ ಕಾರ್ಯವನ್ನು ಎಲ್ಲಾ ಕನ್ನಡಿಗರು ಮಾಡಬೇಕು ಎಂದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ತಾಲುಕು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಕಲಾಸುಕುಮಗಳ ಕಾರ್ಯಕ್ರಮದ ಮೂಲಕ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ತಮ್ಮ ಕಲೆ ಪ್ರದರ್ಶಿಸುತ್ತಾರೆ. ಕನ್ನಡದಲ್ಲಿ ಕಲಾ ಶ್ರೀಮಂತಿಕೆಗೆ ಭರವಿಲ್ಲ ವೆಂಬುವುದನ್ನು ಈ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಅರಿಯಬಹುದಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಅದ್ಯಕ್ಷ ಟಿ.ಜಿ.ವೀರಭದ್ರಸ್ವಾಮಿ, ಪ್ರಾರಂಭದಲ್ಲಿ ತಾಲೂಕಿನ 45 ಗ್ರಾಮಗಳಲ್ಲಿ ಗ್ರಾಮೀಣ ಭಾಗದಕಲೆಗಳ ಬಗ್ಗೆ ಗಮನಹರಿಸುವ ಕಾರ್ಯವನ್ನು ಪರಿಷತ್ ಮಾಡಿದೆ. ಕನ್ನಡ ಕಲಾಕುಸುಮಗಳ ಕಾರ್ಯಕ್ರಮದ ಮೂಲಕ ವಿವಿಧ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ. ವಿಶೇಷವಾಗಿ ಶಿಕ್ಷಕರು ಮಕ್ಕಳ ಪ್ರತಿಭೆಯ ಬಗ್ಗೆ ಒತ್ತು ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಚಿತ್ತಯ್ಯ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಗರಸಭಾ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಮ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಫೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ಕಸಬಾ ಅಧ್ಯಕ್ಷ ಡಿ.ದಯಾನಂದ, ನಾಯಕನಹಟ್ಟಿ ಡಿ.ಕಾಟಯ್ಯ, ಪರಶುರಾಮಪುರ ಅಧ್ಯಕ್ಷ ಕೆ.ವೀರಭದ್ರಪ್ಪ, ತಳಕು ಅಧ್ಯಕ್ಷ ಮಹಂತೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಕೆ.ಟಿ.ಕುಮಾರಸ್ವಾಮಿ, ಸೂರನಹಳ್ಳಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ವಿ.ಜಗದೀಶ್, ಪೌರಾಯುಕ್ತ ಜಗರೆಡ್ಡಿ, ಡಿವೈಎಸ್ಪಿ ರಾಜಣ್ಣ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.