ಸಾರಾಂಶ
ಯಲ್ಲಾಪುರ: ಕನ್ನಡದಲ್ಲಿ ಭಾಷಾ ವೈವಿಧ್ಯತೆ ಅದ್ಭುತವಾಗಿದೆ. ಕನ್ನಡ ಶಾಲೆಗಳಲ್ಲಿ ಆಸಕ್ತ ಶಿಕ್ಷಕರಿದ್ದರೆ ಕನ್ನಡದ ಶಕ್ತಿಯ ರೂಪವನ್ನು ತೋರಿಸಬಹುದು. ಸಕಾರಾತ್ಮಕ ಚಿಂತನೆಗಳು ನಮ್ಮದಾಗಬೇಕು. ಹಳೆಯದನ್ನು ಉಳಿಸಿಕೊಂಡು ಹೊಸ ಚಿಂತನೆಯನ್ನು ಸೇರಿಸಿಕೊಂಡು ಮುನ್ನಡೆಯಬೇಕು ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ತಿಳಿಸಿದರು.ಡಿ. ೨೩ರಂದು ಮಂಚಿಕೇರಿಯ ರಾ.ರಾ. ರಂಗಮಂದಿರದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೬ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಯಾರ್ಯಾರಿಗೋ ಆಸರೆ ಕೊಡಲು ಹೋಗಿ ನಮ್ಮ ಭಾಷೆ, ನೆಲ ಕಳೆದುಕೊಳ್ಳುತ್ತಿದ್ದೇವೆ. ಹಳ್ಳಿಗಳನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗಬೇಕಾಗಿದೆ. ಆ ನಿಟ್ಟಿನಲ್ಲಿ ಸಾಹಿತ್ಯದ ತೇರು ಕೆಲಸ ಮಾಡುವಂತಾಗಬೇಕು. ಮುಂದಿನ ಪೀಳಿಗೆಗೆ ಹಿಂದಿನ ವೈಶಿಷ್ಟ್ಯ ತಿಳಿಸುವಲ್ಲಿ ಬರವಣಿಗೆಗಳು ಪ್ರಮುಖ ಪಾತ್ರ ವಹಿಸುವಂತಾಗಬೇಕು ಎಂದರು.ಸಮ್ಮೇಳನಾಧ್ಯಕ್ಷ ರಾಮಕೃಷ್ಣ ಭಟ್ಟ ಧುಂಡಿ ಮಾತನಾಡಿ, ದಿನವಿಡೀ ನಡೆದ ಅವಲೋಕನ ಹೊಸ ಚೈತನ್ಯ ತುಂಬಿದೆ. ಕನ್ನಡದ ಘನತೆ ಎತ್ತಿ ತೋರಿದೆ. ಜಾಗೃತಿಯನ್ನು ಮೂಡಿಸಿದೆ. ಕನ್ನಡದ ಕುರಿತಾಗಿ ಇಂತಹ ಚಿಂತನೆಗಳು ಹೆಚ್ಚು ನಡೆದಾಗ ಮಾತ್ರ ಕನ್ನಡ ಗಟ್ಟಿಯಗುತ್ತ ಸಾಗಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ವಾಸ್ತವಾಂಶದ ಸಂಗತಿಗಳು ವ್ಯಕ್ತವಾಗಿದೆ. ಈ ಸಾಂಸ್ಕೃತಿಕ ನೆಲೆಗಟ್ಟಿನ ಸ್ಥಳದಲ್ಲಿ ಸಾಹಿತ್ಯ ಸಮ್ಮೇಳನ ಯಶ ಕಂಡಿದೆ. ಒಳ್ಳೆಯ ವಿಚಾರಗಳನ್ನು ಇಟ್ಟುಕೊಂಡು ನಮ್ಮ ಪರಿಷತ್ತು ಸಾಗಿದೆ. ಸರ್ವರ ಸಹಕಾರ ಬಯಸುತ್ತೇವೆ ಎಂದರು.ಈ ಸಂದರ್ಭದಲ್ಲಿ ಉಮೇಶ ಭಾಗ್ವತ್ ಕಳಚೆ(ಸಹಕಾರಿ ಕ್ಷೇತ್ರ), ಎನ್.ಕೆ. ಭಟ್ಟ ಅಗ್ಗಾಸಿಕುಂಬ್ರಿ(ಕೃಷಿ), ಸುರೇಶ ಸಿದ್ದಿ(ನಾಟಕ), ವಿಘ್ನೇಶ್ವರ ಹೆಗಡೆ ಕೆಕ್ಕಾರ್(ಸಾಹಿತ್ಯ), ವೇ. ನಾಗೇಂದ್ರ ಸೂರ್ಯನಾರಾಯಣ ಭಟ್ಟ(ಜ್ಯೋತಿಷ್ಯ), ಎನ್.ಜಿ. ಹೆಗಡೆ ಭಟ್ರಕೇರಿ(ಸಾಮಾಜಿಕ), ನಾಗರಾಜ ಹೆಗಡೆ ಶಿರನಾಲಾ(ಸಂಗೀತ), ದರ್ಶನ ಬಿಲ್ಲವ(ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಹಕಾರಿ ಧುರಿಣ ಆರ್.ಎನ್. ಹೆಗಡೆ ಗೋರ್ಸಗದ್ದೆ, ಜಿಪಂ ಮಾಜಿ ಸದಸ್ಯರಾದ ರಾಘವೇಂದ್ರ ಭಟ್ಟ, ರೂಪಾ ಬೂರ್ಮನೆ, ನಿವೃತ್ತ ಶಿಕ್ಷಕ ಜಿ.ಟಿ. ಭಟ್ಟ ಬೊಮ್ಮನಳ್ಳಿ, ರಾ.ರಾ. ಸಂಸ್ಥೆ ಅಧ್ಯಕ್ಷ ಗುರುಪ್ರಸಾದ ಭಟ್ಟ, ಹಿರಿಯರಾದ ಸೂರ್ಯನಾರಾಯಣ ಮಾಳಕೊಪ್ಪ, ನವೀನ್ ಹೆಗಡೆ ಬೆದೆಹಕ್ಲು ಉಪಸ್ಥಿತರಿದ್ದರು. ಸನ್ಮಾನಿತರ ಪರವಾಗಿ ಉಮೇಶ ಭಾಗ್ವತ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿದರು.ಕಸಾಪ ತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಸ್ವಾಗತಿಸಿದರು. ಶಿಕ್ಷಕ ಶ್ರೀಧರ ಹೆಗಡೆ ಮಾಳಕೊಪ್ಪ ಅಭಿನಂದನಾ ನುಡಿಗಳನ್ನಾಡಿದರು. ಶಿಕ್ಷಕರಾದ ಪ್ರಕಾಶ ಭಟ್ಟ, ರಶ್ಮಿ ಹೆಗಡೆ ನಿರ್ವಹಿಸಿದರು. ಅನಿತಾ ಜಿ. ಹೆಗಡೆ ವಂದಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.