ಕನ್ನಡ ಭಾಷೆಗಿದೆ 2000 ವರ್ಷಗಳ ಇತಿಹಾಸ: ತಹಸೀಲ್ದಾರ್ ಜೂಗಲ ಮಂಜು ನಾಯಕ

| Published : Nov 02 2025, 03:45 AM IST

ಕನ್ನಡ ಭಾಷೆಗಿದೆ 2000 ವರ್ಷಗಳ ಇತಿಹಾಸ: ತಹಸೀಲ್ದಾರ್ ಜೂಗಲ ಮಂಜು ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಜನ್ಮದಿಂದ ಮರಣದವರೆಗೂ ಪ್ರತಿ ಕನ್ನಡಿಗನೂ ಕನ್ನಡವನ್ನು ಉಳಿಸಿ ಬೆಳೆಸುವ ನೈತಿಕ ಜವಾಬ್ದಾರಿ ಹೊಂದಿರಬೇಕು.

ಕಂಪ್ಲಿ: ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅದು ತನ್ನ ಸಾಂಸ್ಕೃತಿಕ ವೈಭವದಿಂದ ಜಗತ್ತಿನ ಮೂಲೆ ಮೂಲೆಗೂ ತನ್ನ ಪ್ರಭಾವ ವಿಸ್ತರಿಸಿದೆ ಎಂದು ತಹಸೀಲ್ದಾರ್ ಜೂಗಲ ಮಂಜು ನಾಯಕ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕನ್ನಡ ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ಸಾಂಸ್ಕೃತಿಕ ಗುರುತು. ಕನ್ನಡವನ್ನು ಕೇವಲ ಕೆಲವರು ಬಳಸುವ ಭಾಷೆ ಎಂದು ಪರಿಗಣಿಸದೆ, ಜನ್ಮದಿಂದ ಮರಣದವರೆಗೂ ಪ್ರತಿ ಕನ್ನಡಿಗನೂ ಕನ್ನಡವನ್ನು ಉಳಿಸಿ ಬೆಳೆಸುವ ನೈತಿಕ ಜವಾಬ್ದಾರಿ ಹೊಂದಿರಬೇಕು. ಮಕ್ಕಳಲ್ಲಿ ಕನ್ನಡದ ಮೆಚ್ಚುಗೆ ಮತ್ತು ಗೌರವವನ್ನು ಬೆಳೆಸುವ ನಿಟ್ಟಿನಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಎಂದು ಹೇಳಿದರು.

ತಾಪಂ ಇಒ ಆರ್.ಕೆ. ಶ್ರೀಕುಮಾರ್ ಮಾತನಾಡಿ, ಹಿಂದಿಯನ್ನು ಹೊರತುಪಡಿಸಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿರುವ ಹೆಮ್ಮೆಯು ಕನ್ನಡಿಗರಿಗೆ ಸೇರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡಪರ ಚಳವಳಿಗಳು ಬೋರ್ಡ್‌ ಬದಲಾವಣೆಯಂತಹ ವಿಷಯಗಳಿಗೆ ಸೀಮಿತವಾಗುತ್ತಿವೆ. ಕನ್ನಡ ಸಾಹಿತ್ಯ ಮತ್ತು ಸೃಜನಶೀಲತೆ ಕಡೆಗಣನೆಯೊಳಗಾಗಿದೆ ಎಂದರು.

ಪ್ರತಿಯೊಬ್ಬರು ಕನ್ನಡ ಪುಸ್ತಕಗಳನ್ನು ಓದುತ್ತಾ, ಸಾಹಿತ್ಯ ಲೋಕದ ಅಭಿವೃದ್ಧಿಗೆ ತಮ್ಮ ಪಾತ್ರ ವಹಿಸಬೇಕು. ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಕುರಿತ ಕ್ವಿಜ್, ಪ್ರಬಂಧ, ಕವನ ಪಾಠ, ಭಾಷಣ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಹಿತ ರಕ್ಷಕ ಸಂಘದ ಗೌರವ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಟ ನಡೆಸಿ ಪ್ರಾಣ ತ್ಯಾಗ ಮಾಡಿದ ಬಳ್ಳಾರಿಯ ರಂಜಾನಸಾಬ್ ಮತ್ತು ಆಮರಣಾಂತಿಕ ಉಪವಾಸ ಸತ್ಯಾಗ್ರಹದಿಂದ ಪ್ರಾಂತ್ಯ ಏಕೀಕರಣದ ದಾರಿ ತೆರೆದ ಪುಟ್ಟಿ ಶ್ರೀರಾಮುಲು ಅವರ ತ್ಯಾಗವನ್ನು ನಾವೆಂದಿಗೂ ಮರೆಯಬಾರದು. ಕನ್ನಡಿಗರಲ್ಲಿ ಭಾಷಾ ಬದ್ಧತೆ ಹಾಗೂ ನಿಷ್ಠೆ ಮೂಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಸುನೀಲ್ ಕನ್ನಡ ಭಾಷೆಯ ಪ್ರಾಮುಖ್ಯತೆ ಕುರಿತ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ವಿಷಯದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ, ಉಪ ತಹಸೀಲ್ದಾರ್ ರವೀಂದ್ರ ಕುಮಾರ್, ತಾಪಂ ಎಡಿ ಕೆ.ಎಸ್.ಮಲ್ಲನಗೌಡ, ಕರ್ನಾಟಕ ದಿಶಾ ಸಮಿತಿ ಸದಸ್ಯ ಎ.ಸಿ. ದಾನಪ್ಪ, ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ, ಕನ್ನಡಪರ ಸಂಘಟನೆಗಳ ಮುಖಂಡರಾದ ಅರವಿ ಬಸವನಗೌಡ, ಅಂಬಣ್ಣ, ಕಾಳಿಂಗ ವರ್ಧನ, ಸಿ.ಚನ್ನಪ್ಪ, ಲಕ್ಷ್ಮಣ, ಆರ್.ಐ. ಜಗದೀಶ್, ಇಸಿಒ ಟಿ.ಎಂ. ಬಸವರಾಜ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.