ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ: ತಹಸೀಲ್ದಾರ್‌

| Published : Nov 02 2024, 01:23 AM IST

ಸಾರಾಂಶ

ಕನ್ನಡ ಸಾಹಿತ್ಯ ಬಹಳಷ್ಟು ಶ್ರೀಮಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿವೆ.

ಹೂವಿನಹಡಗಲಿ: ದೇಶದಲ್ಲಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಕನ್ನಡ ಭಾಷೆಯನ್ನು ಎಲ್ಲರೂ ಉಳಿಸಿ ಬೆಳೆಸುವ ಜತೆಗೆ, ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಕ ಪರಂಪರೆಗೆ ಧಕ್ಕೆ ಬಂದಾಗ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ ಎಂದು ತಹಸೀಲ್ದಾರ್‌ ಸಂತೋಷಕುಮಾರ ಹೇಳಿದರು.

ಇಲ್ಲಿನ ಜಿಪಿಜಿ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಬಹಳಷ್ಟು ಶ್ರೀಮಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿವೆ. ಕನ್ನಡ ಏಕೀಕರಣಕ್ಕಾಗಿ ಸಾಕಷ್ಟು ಸಾಹಿತಿಗಳು ಮನೆ, ಮಠಗಳನ್ನು ಬಿಟ್ಟು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡುವ ಜತೆಗೆ ಅವರ ಹೋರಾಟ ನಮಗೆ ದಾರಿ ದೀಪವಾಗಬೇಕಿದೆ ಎಂದರು.

ತಾಪಂ ಇಒ ಉಮೇಶ ಮಾತನಾಡಿ, ಕನ್ನಡ ಭಾಷೆ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಕನ್ನಡದ ಮೇರು ಕೃತಿಗಳನ್ನು ಹೆಚ್ಚು ಓದಬೇಕು. ಕನ್ನಡ ಪದಗಳನ್ನು ಹೆಚ್ಚು ಬಳಸಿದಾಗ ಭಾಷೆ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ, ಸಿ ಡಿ ಪಿ ಒ ರಾಮನಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆನಂದ್ ಡೊಳ್ಳಿನ, ಪುರಸಭೆ ಮಾಜಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಪಿ. ವೀರೇಂದ್ರ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಅದಕ್ಕೂ ಮೊದಲು ಕನ್ನಡ ಭುವನೇಶ್ವರಿಯ ಆಕರ್ಷಕ ಮೆರವಣಿಗೆ ಜರುಗಿತು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಕನ್ನಡ ಭಾಷೆಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಎಸ್.ಎಂ.ಕೂಡ್ಲಯ್ಯ ಕವಿತೆ ಓದಿ ಚಾಲನೆ ನೀಡಿದರು.

ಕವಿಗಳಾದ ರಾಮಪ್ಪ ಕೋಟಿಹಾಳ, ನಾಗಮಂಜುಳಾ ಜೈನ್, ಪ್ರವೀಣಕುಮಾರ್ ದೈವಜ್ಞಾಚಾರ್ ಕವಿತೆ ವಾಚಿಸಿದರು.