ಕನ್ನಡ ಭಾಷೆ ರಾಷ್ಟದಲ್ಲಿಯೇ 3 ನೇ ಸ್ಥಾನದಲ್ಲಿದೆ: ಎಸ್‌.ಎಚ್‌.ಪೂರ್ಣೇಶ್‌

| Published : Nov 02 2024, 01:24 AM IST

ಕನ್ನಡ ಭಾಷೆ ರಾಷ್ಟದಲ್ಲಿಯೇ 3 ನೇ ಸ್ಥಾನದಲ್ಲಿದೆ: ಎಸ್‌.ಎಚ್‌.ಪೂರ್ಣೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಕನ್ನಡ ಭಾಷೆ ಸುಂದರವಾದ ಭಾಷೆಯಾಗಿದ್ದು ರಾಷ್ಟದಲ್ಲೇ 3 ನೇ ಸ್ಥಾನದಲ್ಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ಎಚ್‌.ಪೂರ್ಣೇಶ್‌ ತಿಳಿಸಿದರು.

ಕುವೆಂಪು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-100 ಮೀಟರ್‌ ಉದ್ದದ ಕನ್ನಡ ಭಾವುಟದ ಮೆರವಣಿಗೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕನ್ನಡ ಭಾಷೆ ಸುಂದರವಾದ ಭಾಷೆಯಾಗಿದ್ದು ರಾಷ್ಟದಲ್ಲೇ 3 ನೇ ಸ್ಥಾನದಲ್ಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ಎಚ್‌.ಪೂರ್ಣೇಶ್‌ ತಿಳಿಸಿದರು.

ಶುಕ್ರವಾರ ಕುವೆಂಪು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಭಾಷೆಗೆ ಛಂದಸ್ಸು, ಲಿಪಿ, ವ್ಯಾಕರಣವಿದೆ. ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯ, ಜಾನಪದ ಸಾಹಿತ್ಯ ಇದೆ. ಕನ್ನಡ ಭಾಷೆಗೆ ಧಕ್ಕೆ ಬಂದಾಗ ಜಾತಿ, ಮತ, ಧರ್ಮ ಮರೆತು ನಾವು ಕನ್ನಡಿಗರು ಎಂದು ಒಟ್ಟಾಗಿ ಹೋರಾಟಕ್ಕೂ ಸಿದ್ದರಾಗಬೇಕು. ಬೇರೆ ಭಾಷೆ ಗೌರವಿಸಿ. ಆದರೆ, ಕನ್ನಡ ಭಾಷೆ ಪ್ರೀತಿಸಿ. ಪ್ರತಿ ದಿನವೂ ಕನ್ನಡದಲ್ಲೇ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು.

ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡಬೇಕು. ಕನ್ನಡ ಶಾಲೆ ಉಳಿದರೆ ಕನ್ನಡ ಭಾಷೆ ಉಳಿದಂತೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ಮಕ್ಕಳಿಗೆ ಕಸಾಪದಿಂದ ಸನ್ಮಾನಿಸಲಾಗುವುದು. ಜನವರಿ ತಿಂಗಳಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿದ್ದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಇಂದು ಬೆಳೆಕಿನ ಹಬ್ಬ ದೀಪಾವಳಿ ಹಾಗೂ ಕನ್ನಡದ ಹಬ್ಬ ರಾಜ್ಯೋತ್ಸವ ಒಟ್ಟಾಗಿದೆ. ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರಾಂತ್ಯವನ್ನು ಒಟ್ಟು ಮಾಡಿ ಮೈಸೂರು ರಾಜ್ಯ ಮಾಡಲಾಗಿತ್ತು. 50 ವರ್ಷದ ಹಿಂದೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಕನ್ನಡ ಭಾಷೆ ಬೆಳವಣಿಗೆಗೆ ಈ ರಾಜ್ಯದ ಕವಿಗಳ ಕೊಡುಗೆ ಅಪಾರ. ಪ್ರತಿಯೊಬ್ಬ ಕನ್ನಡಿಗರಿಗೆ ಭಾಷಾಭಿಮಾನ ಇರಬೇಕು ಎಂದರು.

ತಹಸೀಲ್ದಾರ್‌ ತನುಜಾ ಟಿ.ಸವದತ್ತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಕಾವ್ಯಕ್ಕೆ ವಿಶ್ವ ಸಾಹಿತ್ಯದಲ್ಲಿ ಒಂದು ಸ್ಥಾನ ದೊರಕಿಸಿ ಕೊಟ್ಟವರು 12 ನೇ ಶತಮಾನದ ಬಸವಾದಿ ಶರಣರು. ಅವರ ವಚನ ಸಾಹಿತ್ಯ ಜಗದ್ವಿಖ್ಯಾತ ವಿನೂತನ ಸಾಹಿತ್ಯ ಪ್ರಾಕಾರವಾಗಿ ಕನ್ನಡದ ಶ್ರೀಮಂತಿಕೆಗೂ ಕಾರಣವಾಯಿತು ಎಂದರು.

ವಿವಿಧ ಶಾಲೆಯ ಶಿಕ್ಷಕರಾದ ಶ್ರೀಕಾಂತ್‌, ರಮೇಶನಾಯ್ಕ, ವೀಣಾ ಹಾಗೂ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಕುವೆಂಪು ಕ್ರೀಡಾಂಗಣದವರೆಗೆ ಭುವನೇಶ್ವರಿ ಸ್ತಬ್ದ ಚಿತ್ರ, 100 ಮೀಟರ್‌ ಕನ್ನಡದ ಭಾವುಟದೊಂದಿಗೆ ಮೆರವಣಿಗೆ ನಡೆಯಿತು. ಕುವೆಂಪು ಕ್ರೀಡಾಂಗಣದಲ್ಲಿ ಪೊಲೀಸ್‌, ಹೋಂ ಗಾರ್ಡ್ಸಗಳಿಂದ ಹಾಗೂ ವಿವಿಧ ಶಾಲೆಯ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಪಪಂ ಅಧ್ಯಕ್ಷೆ ಸುರೈಯಾಭಾನು, ಮುಖ್ಯ ಅತಿಥಿಗಳಾಗಿ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡ ಸ್ವಾಮಿ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್‌, ಪಪಂ ಸದಸ್ಯರಾದ ಜುಬೇದ, ಮುನಾವರ್ ಪಾಷಾ, ಮುಕಂದ, ವಾಸೀಂ, ಪಪಂ ನಾಮಿನಿ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌.ಪುಷ್ಪಾ, ಎಪಿಎಂಸಿ ನಿರ್ದೇಶಕ ಎಚ್‌.ಎಂ.ಶಿವಣ್ಣ, ತಾ.ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ,ಜೋಯಿ, ಡಿಎಸ್‌ಎಸ್‌ ಮುಖಂಡರಾದ ವಾಲ್ಮೀಕಿ ಶ್ರೀನಿವಾಸ್‌, ಡಿ.ರಾಮು, ಭವಾನಿ, ಶೆಟ್ಟಿಕೊಪ್ಪ ಮಹೇಶ್‌, ಭದ್ರಾ ಸಹಕಾರ ಸಂಘದ ಉಪಾಧ್ಯಕ್ಷ ಬಿಳಾಲುಮನೆ ಉಪೇಂದ್ರ ಮತ್ತಿತರರು ಇದ್ದರು.