ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಕನ್ನಡ ಸಾಹಿತ್ಯ ಪರಿಷತ್ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷ ವಾಕ್ಯದೊಂದಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಭಾಗದ ಮನೆ,ಮನೆಗಳಲ್ಲೂ ಕನ್ನಡ ಭಾಷೆ ಅರಳಿಸುತ್ತಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ತಿಳಿಸಿದರು.ಭಾನುವಾರ ಆಲ್ದರ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಉಪನ್ಯಾಸ, ಸಾರ್ವಜನಿಕರಿಗೆ ಒಗಟು ಬಿಡಿಸುವ ಸ್ಪರ್ಧೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾ ಕಸಾಪ ದಿಂದ ಕನ್ನಡ ಭಾಷೆ, ಸಂಸ್ಕೃತಿ, ಜಾನಪದ ಕಲೆ ಉಳಿಸುವ ದೃಷ್ಠಿಯಿಂದ ಪ್ರತಿ ಹಳ್ಳಿಗಳಲ್ಲೂ ಕಾರ್ಯಕ್ರಮ ನಡೆಸುತ್ತಿದ್ದೇವೆ. ಗ್ರಾಮೀಣ ಭಾಗದ ಮಣ್ಣಿನ ಸೊಗಡು ಬಿಂಬಿಸುವ ಕಲೆ, ಕಲಾವಿದರನ್ನು ಗುರುತಿಸುತ್ತಿದ್ದೇವೆ. ಗ್ರಾಮೀಣ ಭಾಗದ ಸಾಧಕರು, ಅಲ್ಲಿನ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸುತ್ತಿದ್ದೇವೆ. ಇಂದು ತಾಲೂಕಿನ ಗಡಿ ಭಾಗದ ಆಲ್ದರದಲ್ಲಿ ಕನ್ನಡ ಕಂಪನ್ನು ಅರಳಿಸಿ, ಬೆಳಗಿಸುತ್ತಿದ್ದೇವೆ ಎಂದರು.
ಕಸಾಪ ಜಿಲ್ಲಾ ಸಂಚಾಲಕ ಬಿ.ನಂಜುಂಡಪ್ಪ ಆಶಯ ಭಾಷಣ ಮಾಡಿ, ಗ್ರಾಮೀಣ ಭಾಗ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣ ಕಲಿಯಬೇಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ನರಸಿಂಹರಾಜಪುರ ಕನ್ನಡ ಸಾಹಿತ್ಯ ಪರಿಷತ್ ಹಳ್ಳಿ, ಹಳ್ಳಿಗಳಲೂ ಕನ್ನಡದ ಕಂಪನ್ನು ಬೀರುತ್ತಿದೆ. ತಾಲೂಕಿನ ದೂರದ ಹಳ್ಳಿ ಆಲ್ದರದಲ್ಲಿ ಇಂದು ಕನ್ನಡ ಭಾಷೆ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮುತ್ತಿನಕೊಪ್ಪ ಗ್ರಾಪಂ ಸದಸ್ಯೆ ಸುಜಾತ ಉದ್ಘಾಟಿಸಿ ಮಾತನಾಡಿ, ಆಲ್ದರ ಗ್ರಾಮ ಹಿಂದುಳಿದ ಗ್ರಾಮವಾಗಿದ್ದು ಇಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ನಮ್ಮ ಗ್ರಾಮದಲ್ಲಿ ಕನ್ನಡ ಕಾರ್ಯಕ್ರಮ ನಡೆಸುತ್ತಿರುವುದು ಸಂತಸದ ವಿಷಯ ಎಂದರು. ಮಾರಿದಿಬ್ಬ ಸರ್ಕಾರಿ ಶಾಲೆ ಶಿಕ್ಷಕ ಕೆ.ಎಚ್. ಗಂಗಾಧರಪ್ಪ ಹಳ್ಳಿ ಬದುಕಿನಲ್ಲಿ ಶಿಕ್ಷಣದ ಮಹತ್ವ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಅವಶ್ಯಕತೆ ತಂಬಾ ಇದೆ. ಆಧುನಿಕ ಪ್ರಪಂಚದಲ್ಲಿ ತಂತ್ರಜ್ಞಾನ ತುಂಬಾ ಮುಂದುವರಿದಿದ್ದು ಶಿಕ್ಷಣವಿಲ್ಲದ ಅನೇಕ ಹಳ್ಳಿಗರು ವ್ಯವಹಾರದಲ್ಲಿ ಮೋಸ ಹೋಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು. ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಉಪಸ್ಥಿತರಿದ್ದರು.
ಇದೇ ಸಮಾರಂಭದಲ್ಲಿ ಆಲ್ದರ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಟಿ.ರಾಜಪ್ಪ, ಆಲ್ದರ ಅಂಗನವಾಡಿ ಕಾರ್ಯಕರ್ತೆ ಗಾಯಿತ್ರಿ ಅವರನ್ನು ಸನ್ಮಾನಿಸಲಾಯಿತು.ಸಾರ್ವಜನಿಕರಿಗಾಗಿ ಒಗಟು ಬಿಡಿಸುವ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಾದವರಿಗೆ ಪ್ರಥಮ, ದ್ವಿತೀಯ ಬಹುಮಾನ ನೀಡಲಾಯಿತು.ಗಾಯಿತ್ರಿ ಕಾರ್ಯಕ್ರಮ ನಿರೂಪಿಸಿದರು.