ಕನ್ನಡ ಭಾಷೆ ಭಾವನೆಗಳ ಸಂವಹನದ ಅತ್ಯುತ್ತಮ ಸಾಧನ. ಅದು ನಮ್ಮ ಅಸ್ತಿತ್ವದ ಮೂಲಸ್ವರೂಪ ಹಾಗೂ ನಮ್ಮ ಸಂಸ್ಕೃತಿಯ ಪ್ರತಿಬಿಂಬ ಎಂದು ಸಂಜೀವಿನಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಭುಲಿಂಗಪ್ಪ ಕೋಡದ ಹೇಳಿದರು.
ರಾಣಿಬೆನ್ನೂರು: ಕನ್ನಡ ಭಾಷೆ ಭಾವನೆಗಳ ಸಂವಹನದ ಅತ್ಯುತ್ತಮ ಸಾಧನ. ಅದು ನಮ್ಮ ಅಸ್ತಿತ್ವದ ಮೂಲಸ್ವರೂಪ ಹಾಗೂ ನಮ್ಮ ಸಂಸ್ಕೃತಿಯ ಪ್ರತಿಬಿಂಬ ಎಂದು ಸಂಜೀವಿನಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಭುಲಿಂಗಪ್ಪ ಕೋಡದ ಹೇಳಿದರು.
ನಗರದ ಮೆಡ್ಲೇರಿ ರಸ್ತೆಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಕಸಾಪ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಕೇವಲ ಭಾಷೆಯಾಗಿರದೆ ಬದುಕಿನ ಶಕ್ತಿಯಾಗಿದೆ. ಯುವಜನತೆ ಕನ್ನಡದ ಬಗ್ಗೆ ಹೆಮ್ಮೆ ಮತ್ತು ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಾಡು ಮತ್ತು ನುಡಿಯ ವೈಭವವು ಮಹನೀಯರ ಸಾಧನೆಗಳಿಂದಲೇ ಬೆಳಗಿದೆ ಎಂದರು.
ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಜಗದೀಶ ಮಳೆಮಠ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವು ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಸುವರ್ಣಯುಗವೆಂದೇ ಕರೆಯಲ್ಪಡುತ್ತದೆ. ಅವರ ಕಾಲದಲ್ಲಿ ಕನ್ನಡ ಭಾಷೆಗೆ ಆಡಳಿತಾತ್ಮಕ ಮಾನ್ಯತೆ ದೊರೆಯುವಂತೆ ಕ್ರಮ ಕೈಗೊಳ್ಳಲಾಯಿತು. ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕನ್ನಡ ಅಧ್ಯಯನಕ್ಕೆ ಪ್ರೋತ್ಸಾಹ, ಗ್ರಂಥರಚನೆಗೆ ನೆರವು ಇವುಗಳ ಮೂಲಕ ಕನ್ನಡ ನಾಡು-ನುಡಿಗೆ ಬಲವಾದ ಅಡಿಪಾಯವನ್ನು ಹಾಕಿದರು. ಮೈಸೂರು ರಾಜ್ಯವನ್ನು ಜ್ಞಾನಕೇಂದ್ರವನ್ನಾಗಿ ರೂಪಿಸುವಲ್ಲಿ ಅವರ ಪಾತ್ರ ಅಪಾರ. ಕನ್ನಡದಲ್ಲಿ ಆಡಳಿತ, ಕನ್ನಡದಲ್ಲಿ ಶಿಕ್ಷಣ ಮತ್ತು ಕನ್ನಡದಲ್ಲಿ ಸಂವಹನ ಮೂರೂ ಕ್ಷೇತ್ರಗಳಲ್ಲಿ ಅವರು ತಂದ ಬದಲಾವಣೆಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ. ಹಾಗೆಯೇ ಸರ್ ಎಂ. ವಿಶ್ವೇಶ್ವರಯ್ಯ ಅವರ ಶಿಸ್ತು, ಪರಿಶ್ರಮ ಮತ್ತು ರಾಷ್ಟ್ರ ನಿರ್ಮಾಣದ ದೃಷ್ಟಿಕೋನ ಕನ್ನಡಿಗರಿಗೆ ದಾರಿದೀಪವಾಗಿದೆ. ಆಡಳಿತದಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ದೂರದೃಷ್ಟಿಯು ಆಧುನಿಕ ಮೈಸೂರು ನಿರ್ಮಾಣಕ್ಕೆ ಕಾರಣವಾಯಿತು. ಕನ್ನಡವನ್ನು ಕೇವಲ ಆಚರಣೆಗಳಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಯೊಂದು ಹಂತದಲ್ಲೂ ಅಳವಡಿಸಿಕೊಂಡಾಗ ಮಾತ್ರ ಅದರ ನಿಜವಾದ ಗೌರವ ಉಳಿಯುತ್ತದೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಎಚ್. ದೊಡ್ಡಮನಿ, ನಿವೃತ್ತ ಶಿಕ್ಷಕ, ಯೋಗ ಗುರು ಆರ್.ಬಿ. ಪಾಟೀಲ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ವಾಸಪ್ಪ ಕುಸಗೂರ, ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡರ, ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಪರಿಷತ್ತಿನ ಪರಿಚಯ ವಿಷಯ ಕುರಿತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎಸ್.ಎಂ. ತುಕ್ಕಪ್ಪನವರ ಉಪನ್ಯಾಸ ನೀಡಿದರು. ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತ ವೀರೇಶ ಜಂಬಿಗಿ, ಮೈಸೂರು ದತ್ತಿ ಪ್ರಶಸ್ತಿ ಪುರಸ್ಕೃತ ಡಾ. ಕಾಂತೇಶರೆಡ್ಡಿ ಗೋಡಿಹಾಳ ಅವರನ್ನು ಸನ್ಮಾನಿಸಲಾಯಿತು.ಶ್ರೀ ಶಾರದಾ ಭರತನಾಟ್ಯ ಕಲಾ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.
ಎಚ್.ಎಚ್. ಜಾಡರ, ವಿದ್ಯಾವತಿ ಮಳಿಮಠ, ಮಲ್ಲಿಕಾರ್ಜುನ ಸಾವಕ್ಕಳವರ, ಎಚ್.ಎಸ್. ಮುದಿಗೌಡರ, ಬಸವರಾಜ ಉಮ್ಮನಗೌಡ್ರ, ವಿ.ಎಸ್. ಹಿರೇಮಠ, ಪರಶುರಾಮ ಸವಣೂರ, ಪ್ರಿಯಾ ಸವಣೂರ, ಪರಶುರಾಮ ಕುರುವತ್ತಿ, ಗಂಗಮ್ಮ ಹಾವನೂರ, ಗಾಯತ್ರಮ್ಮ ಕುರುವತ್ತಿ ಮತ್ತಿತರರಿದ್ದರು.