ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ದೃಢಸಂಕಲ್ಪ ಅಗತ್ಯ: ಡಾ.ಬೋರೇಗೌಡ ಚಿಕ್ಕಮರಳಿ

| Published : Dec 01 2024, 01:32 AM IST

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ದೃಢಸಂಕಲ್ಪ ಅಗತ್ಯ: ಡಾ.ಬೋರೇಗೌಡ ಚಿಕ್ಕಮರಳಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ರಾಜ್ಯೋತ್ಸವ ಸಮಾರಂಭಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳ್ಳಬಾರದು. ಕನ್ನಡಾಂಬೆಯೂ ನಾಡ ದೇವತೆಯಾಗಿರುವುದರಿಂದ ನಿತ್ಯ ಉತ್ಸವದಂತೆ ಕನ್ನಡ ರಾಜ್ಯೋತ್ಸವವನ್ನು ವರ್ಷವಿಡೀ ಆಚರಣೆ ಮಾಡುವ ಮೂಲಕ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ಯುವಜನತೆ ದೃಢಸಂಕಲ್ಪದೊಂದಿಗೆ ಕನ್ನಡದಲ್ಲಿಯೇ ಸಹಿ ಮಾಡಿ, ವ್ಯವಹರಿಸುವ ಮೂಲಕ ಭಾಷೆ ಬೆಳವಣಿಗೆಗೆ ಮುಂದಾಗಬೇಕು ಎಂದು ಸಾಹಿತಿ ಡಾ.ಬೋರೇಗೌಡ ಚಿಕ್ಕಮರಳಿ ಹೇಳಿದರು.

ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಜೈಕನ್ನಡಾಂಬೆ ಯುವಕರ ಬಳಗದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕ ರಾಜ್ಯ ಉದಯವಾಗಿ 69ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮದಿಂದ ಎಲ್ಲರೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದಾರೆ ಎಂದರು.

ಕನ್ನಡ ರಾಜ್ಯೋತ್ಸವ ಸಮಾರಂಭಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತಗೊಳ್ಳಬಾರದು. ಕನ್ನಡಾಂಬೆಯೂ ನಾಡ ದೇವತೆಯಾಗಿರುವುದರಿಂದ ನಿತ್ಯ ಉತ್ಸವದಂತೆ ಕನ್ನಡ ರಾಜ್ಯೋತ್ಸವವನ್ನು ವರ್ಷವಿಡೀ ಆಚರಣೆ ಮಾಡುವ ಮೂಲಕ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಯುವ ಜನತೆ ಕನ್ನಡ ಭಾಷೆಯಲ್ಲಿ ವ್ಯವಹರಿಸಿ ಸಹಿ ಮಾಡಬೇಕು, ಸಂಕಲ್ಪ ಮಾಡಬೇಕು. ಜತೆಗೆ ನಮ್ಮೂರಿನ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಕನ್ನಡದ ಸರಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಹೇಳಿದರು.

ಮಕ್ಕಳಿಗೆ ಇಂಗ್ಲೀಷ್ ಭಾಷೆ ಕಲಿಸಿ. ಆದರೆ, ಕನ್ನಡವನ್ನು ಮಾತೃಭಾಷೆಯನ್ನಾಗಿಸಿಕೊಳ್ಳಬೇಕು. ಕನ್ನಡದ ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಸರಕಾರಿ ಮಾಧ್ಯಮದ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದು ತಲುಪಲಿವೆ. ಊರಿನ ಸರಕಾರಿ ಶಾಲೆ ಮುಚ್ಚಿದರೆ ವಿದ್ಯಾಭ್ಯಾಸಕ್ಕಾಗಿ ನಮ್ಮೂರಿನ ಮಕ್ಕಳು ಬೇರೆ ಊರುಗಳಿಗೆ ಹೋಗಬೇಕಾಗತ್ತದೆ ಎಂದು ತಿಳಿಸಿದರು.

ತಾಪಂ ಮಾಜಿ ಸದಸ್ಯೆ ಮಂಗಳ ನವೀನ್‌ಕುಮಾರ್ ಮಾತನಾಡಿ, ಕರ್ನಾಟಕದ ಏಕೀಕರಣದ ನೆನಪಿಗಾಗಿ ನಾವು ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಕನ್ನಡ ನಾಡು- ನುಡಿ, ಸಾಹಿತ್ಯದ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತ ಚನ್ನಮಾದೇಗೌಡ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗೆ ಹೋರಾಟ ನಡೆಸುವ ಸನ್ನಿವೇಶ ಬಂದಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡಕ್ಕೆ ರಾಜ್ಯದ ಗಡಿಭಾಗದಲ್ಲಿ ಶೋಷಣೆ ನಡೆಯುತ್ತಿದೆ, ಪ್ರತಿಯೊಬ್ಬ ಕನ್ನಡಿಗನೂ ಒಗ್ಗಟ್ಟಿನಿಂದ ಭಾಷೆ ಉಳಿಸಲು ಸಂಕಲ್ಪ ತೊಡಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಪಾರ್ವತಮ್ಮ ಮಾತನಾಡಿದರು. ಸರಕಾರಿ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಈ ವೇಳೆ ಡೇರಿ ಮಾಜಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಪಾಪಯ್ಯ, ಶಿಕ್ಷಕ ಪ್ರದೀಪ್, ಬಿಜೆಪಿ ಮುಖಂಡ ನವೀನ್, ಸಿ.ಆರ್.ಸಂತೋಷ್, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ, ಗೋಪಿ, ದೊಡ್ಡಯ್ಯ, ಜೈಕನ್ನಡಾಂಬೆ ಬಳಗದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಯೋಗೇಶ್, ಕಾರ್‍ಯದರ್ಶಿ ಕಿರಣ್, ಖಜಾಂಚಿ ಚನ್ನೇಗೌಡ, ಪದಾಧಿಕಾರಿ ವಿನಯ್, ವೀರಭದ್ರಾಚಾರಿ, ಶ್ರಾವಣ್, ವೀರಭದ್ರ ಸೇರಿದಂತೆ ಹಲವರು ಇದ್ದರು.