ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ಆರಂಭವಾದ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆಯಿತು.
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ಆರಂಭವಾದ 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆಯಿತು.ಸೋಮವಾರ ಬೆಳಗ್ಗೆ 7 ಗಂಟೆಗೆ ಗಾಜಿನ ಮನೆ ಆವರಣದಲ್ಲಿ ತುಮಕೂರು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಬೆಳಿಗ್ಗೆ 9 ಗಂಟೆಗೆ ತುಮಕೂರು ಮಹಾನಗರಪಾಲಿಕೆ ಆವರಣದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ: ಕರೀಗೌಡ ಬೀಚನಹಳ್ಳಿ, ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಮಹಾನಗರಪಾಲಿಕೆ ಆಯುಕ್ತ ಯೋಗಾನಂದ್ ಸೇರಿದಂತೆ ಅಪಾರ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಾಡ ದೇವಿ ಕನ್ನಡಾಂಬೆ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕರೀಗೌಡ ಬೀಚನಹಳ್ಳಿ ದಂಪತಿಯನ್ನು ಬೆಳ್ಳಿ ಸಾರೋಟಿನಲ್ಲಿ ಮೆರವಣಿಗೆಗೆ ಅಣಿಗೊಳಿಸಲಾಯಿತು.ಡೊಳ್ಳು, ನಂದಿಧ್ವಜ, ಕೋಲಾಟ, ವೀರಗಾಸೆ, ಸೋಮನಕುಣಿತ, ತಮಟೆ, ಅರೆವಾದ್ಯ, ಚಿಟ್ಟಿಮೇಳ, ಕೊಂಬುಕಹಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಅದ್ದೂರಿ ಮೆರವಣಿಗೆಯೊಂದಿಗೆ ಟೌನ್‌ಹಾಲ್ ವೃತ್ತದಿಂದ ಎಂ.ಜಿ.ರಸ್ತೆ, ಗುಂಚಿಚೌಕ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಡಾ: ಅಂಬೇಡ್ಕರ್ ರಸ್ತೆ ಮಾರ್ಗವಾಗಿ ಗಾಜಿನಮನೆಯ ವೇದಿಕೆಗೆ ಮೆರವಣಿಗೆ ಸಾಗಿತು.
ಮೆರವಣಿಗೆಯುದ್ದಕ್ಕೂ ಕನ್ನಡಾಭಿಮಾನಿಗಳು ಸರ್ವಾಧ್ಯಕ್ಷ ದಂಪತಿಗೆ ಪುಷ್ಪವೃಷ್ಟಿಗರೆದು ಸಂತಸ ವ್ಯಕ್ತಪಡಿಸಿದರು. ಅಂತಿಮವಾಗಿ ಗಾಜಿನ ಮನೆ ಆವರಣ ಸಾಹಿತ್ಯ ಸಂಭ್ರಮದ ತೀರ್ಥಕ್ಷೇತ್ರವಾಯಿತು. ಕರುನಾಡಿನ ಬಾವುಟಗಳು ಗಾಳಿಯಲ್ಲಿ ಹೆಮ್ಮೆಯಿಂದ ಹಾರಾಡುತ್ತಿದ್ದು, ಕನ್ನಡದ ಆತ್ಮಗೌರವವನ್ನೇ ಪ್ರತಿಬಿಂಬಿಸುತ್ತಿದ್ದವು. ಸಮ್ಮೇಳನ ಆವರಣದಲ್ಲಿದ್ದ ಪುಸ್ತಕ ಮಳಿಗೆಗಳ ಕಡೆಗೆ ಜನರು ಗುಂಪುಗೂಡಿ ಅಕ್ಷರ ಲೋಕದ ಭುವನವನ್ನು ತುಂಬಿಕೊಂಡರು. ಪುಸ್ತಕಗಳ ಮೇಲೆ ಜನರ ಪ್ರೀತಿ, ಓದುಗರ ಉತ್ಸಾಹ ಇವೆಲ್ಲವು ಕನ್ನಡ ಸಾಹಿತ್ಯದ ಭವಿಷ್ಯ ಸಧೃಢವಾಗಿದೆ ಎಂಬ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು.ಈ ರೀತಿ ಅಕ್ಷರ, ಕಲೆ, ಸಂಸ್ಕೃತಿ, ಭಾವನೆ, ಭಕ್ತಿ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ಒಂದಾಗಿಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ, ಕೇವಲ ಕಾರ್ಯಕ್ರಮವಲ್ಲ, ಇದು ಕನ್ನಡಿಗರ ಆತ್ಮಸಾಕ್ಷಿಯ ಸಂಭ್ರಮ, ಭಾಷೆಯ ಗೌರವದ ಹಬ್ಬ ಮತ್ತು ಸಂಸ್ಕೃತಿಯ ಜೀವಂತ ರಂಗೋಲಿ ಎಂಬುದಾಗಿ ಸಮ್ಮೇಳನದ ಉತ್ಸವ ನೆನಪಿನಲ್ಲಿ ಸದಾಕಾಲ ಉಳಿಯುವಂತಾಯಿತು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ, ಖ್ಯಾತ ಸಾಹಿತಿ ನಾಡೋಜ ಡಾ: ಬರಗೂರು ರಾಮಚಂದ್ರಪ್ಪ, ನಿಕಟಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತಿಯಲ್ಲಿ 2 ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆಯಿತು.