ಕನ್ನಡ ಸಾಹಿತ್ಯಕ್ಕೆ ಸಂಭ್ರಮ ಉಂಟುಮಾಡುವ ಶಕ್ತಿ ಇದೆ: ಷಣ್ಮುಖಪ್ಪ ಮುಚ್ಚಂಡಿ

| Published : Feb 03 2024, 01:48 AM IST

ಕನ್ನಡ ಸಾಹಿತ್ಯಕ್ಕೆ ಸಂಭ್ರಮ ಉಂಟುಮಾಡುವ ಶಕ್ತಿ ಇದೆ: ಷಣ್ಮುಖಪ್ಪ ಮುಚ್ಚಂಡಿ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಕಿಆಲೂರು ಪಟ್ಟಣದ ಮುತ್ತಿನಕಂತಿಮಠದ ಆವರಣದಲ್ಲಿ ನಡೆದಿರುವ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ವೈಭವದಿಂದ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಅಕ್ಕಿಆಲೂರು: ಕನ್ನಡ ಸಾಹಿತ್ಯಕ್ಕೆ ಸಂಭ್ರಮವನ್ನುಂಟು ಮಾಡುವ ಶಕ್ತಿ ಇದ್ದು, ವಿದೇಶಿಗರ ಗೊಡ್ಡು ಆಚರಣೆಗಳಿಗೆ ತಲೆದೂಗುವ ನಾಡಿನ ಯುವಶಕ್ತಿ ಜಾಗೃತವಾಗಿ, ಸಂಸ್ಕೃತಿ, ಕಲೆ, ಜನಪದ ಸಾಹಿತ್ಯ ಸೇರಿದಂತೆ ನಾಡಿನ ವಿವಿಧ ಕ್ಷೇತ್ರಗಳನ್ನು ಜಗತ್ತಿನಾದ್ಯಂತ ಪ್ರಚುರ ಪಡಿಸುವ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಹೇಳಿದರು. ಪಟ್ಟಣದ ಮುತ್ತಿನಕಂತಿಮಠದ ಆವರಣದಲ್ಲಿ ನಡೆದಿರುವ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ ೩೨ರ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ವಿಶ್ವಮಾನ್ಯವಾಗಿರುವ ನಮ್ಮ ನಾಡಿನ ಸಿರಿವಂತಿಕೆಯನ್ನು ಆಸ್ವಾದಿಸುವ ಮನಸ್ಥಿತಿ ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗರದ್ದಾಗಬೇಕು. ಸಂಸ್ಕಾರವಂತ ನಾಡಿನಲ್ಲಿ ಜನಿಸಿರುವ ನಾವೆಲ್ಲರೂ ನಮ್ಮ ನಾಡಿನ ಆಚಾರ-ವಿಚಾರಗಳಿಗೆ ಪ್ರಾಮುಖ್ಯ ನೀಡುವ ಮೂಲಕ ಮೂಲ ಸಂಸ್ಕೃತಿಯ ಅನಾವರಣಕ್ಕೆ ಮುಂದಾಗಬೇಕಿದೆ. ಕನ್ನಡ ಭಾಷೆಗಿರುವ ಜಾನಪದ ಸೊಗಡಿನ ಭಾವ ಉತ್ತರ ಕರ್ನಾಟಕದ ಕೊಡುಗೆಯಾಗಿದ್ದು, ಇದರಿಂದಾಗಿ ಕನ್ನಡಕ್ಕೆ ಮತ್ತಷ್ಟು ಶ್ರೀಮಂತಿಕೆ ತಂದುಕೊಟ್ಟಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ಜಗತ್ತಿನ ಸಂಸ್ಕೃತಿಗೆ ವಿಶಿಷ್ಟ ಕೊಡುಗೆ ನೀಡಿದ ನಮ್ಮ ನಾಡು ತನ್ನದೇ ಆದ ವೈಶಿಷ್ಟ್ಯಗಳ ಮೂಲಕ ಅಗ್ರಗಣ್ಯವಾಗಬಲ್ಲ ಸಾಮರ್ಥ್ಯ ಹೊಂದಿದೆ. ಹಾನಗಲ್ಲ ಲಿಂ. ಕುಮಾರ ಮಹಾಶಿವಯೋಗಿಗಳು ಮತ್ತು ಅಕ್ಕಿಆಲೂರಿನ ವಿರಕ್ತಮಠದ ಮೌನತಪಸ್ವಿ ಲಿಂ. ಚನ್ನವೀರ ಶಿವಯೋಗಿಗಳು ನಡೆದಾಡಿದ ಈ ನಾಡು ಸಂಸ್ಕಾರದ ತಾಯಿಬೇರಾಗಿದೆ. ನಾಡಿನ ಕಲೆ, ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕಿದೆ ಎಂದರು.

ಕಸಾಪ ಹೋಬಳಿ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ ಮಾತನಾಡಿದರು. ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ, ಮಲ್ಲಿಕಾರ್ಜುನ ಕಂಬಾಳಿ, ಸದಾನಂದ ಉಡುಪಿ, ಸದಾಶಿವ ಕಂಬಾಳಿ, ಶಿವಕುಮಾರ ದೇಶಮುಖ, ನಾಗರಾಜ ಅಡಿಗ, ಮುತ್ತಪ್ಪ ಮುಚ್ಚಂಡಿ, ಶಿವು ಕೊಲ್ಲಾವರ, ಸುಜಾತಾ ಕೊಲ್ಲಾವರ, ಕಾವ್ಯಾ ಬೆಲ್ಲದ, ಸವಿತಾ ಕೂಬಿಹಾಳ ಪಾಲ್ಗೊಂಡಿದ್ದರು.

ನುಡಿ ಸಂಭ್ರಮದ ಮೆರಗು ಹೆಚ್ಚಿಸಿದ ಶೋಭಾಯಾತ್ರೆ:ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ-೩೨ ಕಾರ್ಯಕ್ರಮದ ಪ್ರಯುಕ್ತ ನಡೆದ ಕನ್ನಡ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಗೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಸಿದ್ರಾಮಪ್ಪ ವಿರೂಪಣ್ಣನವರ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.ಪಟ್ಟಣದ ಹೊಸ ಬಸ್‌ ನಿಲ್ದಾಣದ ಬಳಿಯ ವರಸಿದ್ಧಿ ಆಂಜನೇಯ ದೇವವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಸುಮಾರು ೨ ಕಿಮೀ ಉದ್ದದ ಮೆರವಣಿಗೆಯಲ್ಲಿ ನಾಡು-ನುಡಿ-ಸಂಸ್ಕೃತಿ ಸಾರುವ ಗ್ರಾಮೀಣ ಸೊಗಡಿನ ಕಲಾತಂಡಗಳು, ಪೌರಾಣಿಕ ಪಾತ್ರಗಳು, ವಿವಿಧ ಕಲಾತಂಡಗಳ ಜನಪದ ಸಿರಿ, ಜಗಜ್ಯೋತಿ ಬಸವಣ್ಣನವರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಅಕ್ಕಮಹಾದೇವಿಯ ರೂಪಕ, ಲಂಬಾಣಿ ನೃತ್ಯ, ಲೇಜಿಮ್ ನೃತ್ಯ, ದಶವತಾರಿ ದೇವಿ, ವಿಜಯನಗರದ ಕೃಷ್ಣದೇವರಾಯರ ರೂಪಕ, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ತಬ್ಧಚಿತ್ರಗಳು, ತಾಯಿ ಭುವನೇಶ್ವರಿ ದೇವಿಯ ರೂಪಕ, ಕನಕ ಹಾಗೂ ಕೃಷ್ಣರ ಭಕ್ತಿಯ ಪ್ರತಿನಿಧಿತ್ವದ ಪಾತ್ರಗಳು, ಜನಪದ ಶೈಲಿಯ ಉಡುಗೆಯ ಮಕ್ಕಳು, ಸಂಗೊಳ್ಳಿ ರಾಯಣ್ಣನ ಪಾತ್ರ, ರಾಣಿ ಚನ್ನಮ್ಮನ ಆಸ್ಥಾನದ ರೂಪಕ ಹೀಗೆ ಸುಮಾರು ೨೦-೨೫ ಟ್ಯಾಬ್ಲೊಗಳು ಆಕರ್ಷಿಸಿದವು. ಕನ್ನಡ ನಾಡು ನುಡಿ ಜಾಗೃತಿಯ ಕುರಿತು ಘೋಷಣೆಗಳು, ಕನ್ನಡಗೀತೆಗಳು ಮೆರವಣಿಗೆಯ ಉದ್ದಗಲಕ್ಕೂ ಕಂಡುಬಂದವು.

ದುಂಡಿ ಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ, ಕಾರ್ಯದರ್ಶಿ ಷಣ್ಮುಖಪ್ಪ ಮುಚ್ಚಂಡಿ, ಉದಯಕುಮಾರ ವಿರೂಪಣ್ಣನವರ, ನಾಗರಾಜ ಅಡಿಗ, ಮುತ್ತಪ್ಪ ಮುಚ್ಚಂಡಿ, ಶಿವಕುಮಾರ ದೇಶಮುಖ, ಮಲ್ಲಿಕಾರ್ಜುನ ಕಂಬಾಳಿ, ಸದಾಶಿವ ಕಂಭಾಳಿ ಹಾಜರಿದ್ದರು.