ಕನ್ನಡ ಸಾಹಿತ್ಯ ಹೃದಯಗಳನ್ನು ಬೆಸೆಯುತ್ತದೆ: ತಿಮ್ಮಣ್ಣ ನಾಯಕ

| Published : Dec 14 2024, 12:48 AM IST

ಕನ್ನಡ ಸಾಹಿತ್ಯ ಹೃದಯಗಳನ್ನು ಬೆಸೆಯುತ್ತದೆ: ತಿಮ್ಮಣ್ಣ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಕಾರಟಗಿ ತಾಲೂಕಿನ ಮುಸ್ಟೂರು-ಅಂಜೂರಿಕ್ಯಾಂಪ್‌ನ ಎಚ್.ಜಿ. ರಾಮುಲು ಸರ್ಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡ ಕಾರ್ತಿಕೋತ್ಸವ‘ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಉಪನ್ಯಾಸ ಮಾಲೆಯಲ್ಲಿ ‘ಸಾಹಿತ್ಯದ ಸಾಂಗತ್ಯ ಮತ್ತು ಅದು ಬೀರುವ ಸುಗಂಧತೆ‘ ವಿಷಯದ ಕುರಿತು ಉಪನ್ಯಾಸ ನೀಡಲಾಯಿತು.

ಕಾರಟಗಿ: ಕನ್ನಡ ಸಾಹಿತ್ಯದ ಅಧ್ಯಯನ ಮನುಷ್ಯನ ಒಳಗಣ್ಣನ್ನು ತೆರೆಸುವ ಜತೆಗೆ ಹೃದಯಗಳನ್ನು ಬೆಸೆಯುತ್ತದೆ. ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನೂ ಬೆಳೆಸುತ್ತದೆ. ವಿದ್ಯಾರ್ಥಿಗಳಲ್ಲಿ ಈ ಸಾಮರ್ಥ್ಯ ಸೃಷ್ಟಿಸುವುದರಿಂದ ವಿದ್ಯಾರ್ಥಿ ಸಮೂಹ ಹೆಚ್ಚು ಕನ್ನಡ ಸಾಹಿತ್ಯವನ್ನು ಓದಬೇಕು ಎಂದು ಕಾರಟಗಿ ಪಶ್ಚಿಮ ವಲಯದ ಸಿಆರ್‌ಪಿ ತಿಮ್ಮಣ್ಣ ನಾಯಕ ಹೇಳಿದರು.

ತಾಲೂಕಿನ ಮುಸ್ಟೂರು-ಅಂಜೂರಿಕ್ಯಾಂಪ್‌ನ ಎಚ್.ಜಿ. ರಾಮುಲು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಕಾರ್ತಿಕೋತ್ಸವ‘ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ‘ಸಾಹಿತ್ಯದ ಸಾಂಗತ್ಯ ಮತ್ತು ಅದು ಬೀರುವ ಸುಗಂಧತೆ‘ ವಿಷಯದ ಕುರಿತು ಮಾತನಾಡಿದರು.

ಕನ್ನಡ ಸೇರಿದಂತೆ ಎಲ್ಲ ಭಾಷೆಗಳ ಸಾಹಿತ್ಯ ಅಧ್ಯಯನ ಆಲೋಚನೆ, ಒಳನೋಟ, ವಿಮರ್ಶೆ ಮಾಡುವುದನ್ನು ಕಲಿಸುತ್ತದೆ. ಸಾಹಿತ್ಯ ಅಧ್ಯಯನಶೀಲ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಬೆಳೆದು, ಸ್ಪಷ್ಟ ಅಭಿಪ್ರಾಯ ತಿಳಿಸಲು ಸಹಕಾರಿಯಾಗುತ್ತದೆ ಎಂದರು.

ಸಾಹಿತ್ಯದ ಅಧ್ಯಯನವು ಮನುಷ್ಯನಲ್ಲಿ ಸೃಜನಶೀಲ ಮನಸ್ಸನ್ನು ರೂಪಿಸುತ್ತದೆ. ಯುವ ಸಮೂಹದ ನಾವಿನ್ಯತೆ ಮತ್ತು ಬದಲಾವಣೆಯನ್ನು ಪ್ರೇರೇಪಿಸುವ ಜತೆಗೆ ಒಳಿತು ಬಯಸುವ ಬದಲಾವಣೆ ತರುತ್ತದೆ ಎಂದರು.

ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಸದಸ್ಯ ಬಸವರಾಜ ರ‍್ಯಾವಳದ ಮಾತನಾಡಿ, ಕನ್ನಡ ಭಾಷೆಯ ಹಿರಿಮೆ, ಗರಿಮೆ, ಪರಂಪರೆ, ಪ್ರಸ್ತುತತೆಯನ್ನು ತಾಲೂಕಿನ ಪ್ರತಿ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಮುಟ್ಟಿಸುವುದು ಪರಿಷತ್ತಿನ ಕಾರ್ಯ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಅತ್ಯಾಚಾರದಂಥ ಘಟನೆಗಳು ವ್ಯಾಪಕವಾಗಿವೆ. ಈ ಅನೈತಿಕ ಅಧಃಪತನಕ್ಕೆ ಸಾಹಿತ್ಯದ ಓದಿನಿಂದ ಮಕ್ಕಳು ಮತ್ತು ಯುವಕರು ವಿಮುಖರಾಗುತ್ತಿರುವುದೇ ಕಾರಣ. ಈ ನಿಟ್ಟಿನಲ್ಲಿ ಶ್ರೀಮಂತವಾಗಿರುವ ಕನ್ನಡ ಭಾಷೆಯ ಸೊಗಸು, ಸಾಹಿತ್ಯದ ಸೊಬಗನ್ನು ಮಕ್ಕಳಿಗೆ ಮುಟ್ಟಿಸುವ ಕೆಲಸದಲ್ಲಿ ತೊಡಗಿರುವ ಪರಿಷತ್ತಿನ ಎಲ್ಲ ಕೆಲಸ ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸೋಣ. ಆ ಮೂಲಕ ಭವಿಷ್ಯದ ಪ್ರಜೆಗಳಾಗಿರುವ ಮಕ್ಕಳಲ್ಲಿ ಒಳ್ಳೆಯತನದ ಅಂಶಗಳನ್ನು ಬಿತ್ತೋಣ ಎಂದರು.

ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ವೈ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಹನುಮಂತಪ್ಪ ತೊಂಡಿಹಾಳ, ಸದಸ್ಯರಾದ ಬಸವರಾಜ್ ರ‍್ಯಾವಳದ್ ಮತ್ತು ಉಪನ್ಯಾಸ ನೀಡಿದ ಶಿಕ್ಷಕ ತಿಮ್ಮಣ್ಣ ನಾಯಕ್, ಸಮಾಜ ಸೇವಕ ಜಿ. ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ, ಸಿಆರ್‌ಪಿಗಳಾದ ಭೀಮಣ್ಣ ಕರಡಿ, ಬಸನಗೌಡ ಶ್ರೀರಾಮನಗರ, ಶಿಕ್ಷಕರಾದ ಶಿವಕುಮಾರ ಸ್ವಾಮಿ, ಸಿದ್ದಲಿಂಗಪ್ಪ, ವಿಕಾಸ್ ಕರ್ಣಂ, ಶ್ರೀಧರ ನೆಕ್ಕಂಟಿ, ಸತ್ಯನಾರಾಯಣ, ಜಿ. ಬಸವರಾಜ್‌ ಇದ್ದರು.

ಕೆ.ಆರ್. ಸಂತೋಷ, ಶರಣಗೌಡ ಮತ್ತು ಮಂಜುನಾಥ ಕೆಳಗಿನಗೌಡರ್ ಕಾರ್ಯಕ್ರಮ ನಿರ್ವಹಿಸಿದರು.