ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಸಾಧು- ಸಂತರು, ದಾಸರು- ಶಿವಶರಣರು, ಕವಿ- ಕೋಗಿಲೆಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು, ಧೀಮಂತ ಶಕ್ತಿಯ ಬೀಡು ಎಂದು ತಹಸೀಲ್ದಾರ್ ಹುಸೇನ್ ಸರಕಾವಸ್ ಬಣ್ಣಿಸಿದರು. ಪಟ್ಟಣದ ರಂಗಮಂದಿರದ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನಾಡಿನ ಪ್ರತಿಯೊಬ್ಬರೂ ನವೆಂಬರ್ ಕನ್ನಡಿಗರಾಗದೇ ನಿತ್ಯ ವ್ಯವಹಾರದಲ್ಲಿಯೂ ಕನ್ನಡವನ್ನು ಬಳಸುವ ಮೂಲಕ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಕಟಿಬದ್ಧರಾಗುವ ದೃಢ ಸಂಕ್ಪಲ್ಪ ಮಾಡಬೇಕು. ರಾಜ್ಯದ ಏಕೀಕರಣಕ್ಕಾಗಿ ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕೆ.ಶಿವರಾಮ ಕಾರಂತ, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಠಯ್ಯ ಸೇರಿದಂತೆ ಅನೇಕ ಮಹನೀಯರ ಕೊಡುಗೆ ಅಮೂಲ್ಯವಾಗಿದ್ದು, ಅವರನ್ನು ಸ್ಮರಿಸಬೇಕಿದೆ ಎಂದರು.
ಕನ್ನಡ ನಾಡು, ನುಡಿ, ರಾಜ್ಯೋತ್ಸವ ಆಚರಣೆ ಹಿನ್ನೆಲೆಯನ್ನು ಕನ್ನಡಾಂಬೆ ಮಕ್ಕಳಾದ ನಾವು ಮಾಹಿತಿಯನ್ನು ಸದಾ ತಿಳಿದಿರಬೇಕು. ಅನ್ಯಭಾಷಿಕರಿಗೂ ಕನ್ನಡ ಕಲಿಸುವ ಮೂಲಕ ಕನ್ನಡ ಇಡೀ ವಿಶ್ವವನ್ನೇ ಪಸರಿಸುವಂತೆ ಮಾಡಬೇಕು. ಭಾಷಾ ಶ್ರೀಮಂತಿಕೆ ಎತ್ತಿಹಿಡಿಯಬೇಕು. ಮೈಸೂರು ರಾಜ್ಯ ಎಂಬುದು ಕರ್ನಾಟಕ ಎಂದು ನಾಮಕರಣವಾಗಿ ಪ್ರಸಕ್ತ ವರ್ಷಕ್ಕೆ 50 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು. ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಭುವನೇಶ್ವರಿ ಮಾತೆಯ ಭಾವಚಿತ್ರದೊಂದಿಗೆ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಕನ್ನಡ ನಾಡಿನ ಹಲವು ಸಾಧು-ಸಂತರ, ಕವಿಗಳ ವೇಷ ಧರಿಸಿದ ಮಕ್ಕಳು ಹಾಗೂ ಹುಲಿವೇಷ ಧಾರಿಗಳು, ಕರಾವಳಿಯ ದೈವದ ರೂಪದಲ್ಲಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯ ಕನ್ನಡ ಭಾಷಾ ವಿಷಯದಲ್ಲಿ ಪೂರ್ಣ ಅಂಕಗಳ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪುರಸ್ಕರಿಸಲಾಯಿತು. ಪುರಸಭೆ ಸದಸ್ಯರಾದ ಎಂ.ಡಿ. ಉಮೇಶ್, ಈರೇಶ್ ಮೇಸ್ತ್ರಿ, ಮಧುರಾಯ್ ಜಿ. ಶೇಟ್, ಆಫ್ರೀನಾ, ಸುಲ್ತಾನ ಬೇಗಂ, ಯು.ನಟರಾಜ್, ಪ್ರೇಮಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ್, ಬಿಇಒ ಟಿ.ಎಂ. ಸತ್ಯನಾರಾಯಣ, ಇಒ ಡಾ. ಪ್ರದೀಪ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಟಿ. ಬಾಲಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರೇವಣಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜಿ. ಕುಮಾರ್, ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ಕರವೇ ಅಧ್ಯಕ್ಷ ಸಿ.ಕೆ. ಬಲೀಂದ್ರಪ್ಪ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್, ನಿವೃತ್ತ ಮುಖ್ಯಶಿಕ್ಷಕ ರಾಜಪ್ಪ ಮಾಸ್ತರ್, ಪಿಎಸ್‌ಐ ಎಸ್. ನಾಗರಾಜ್, ದೈಹಿಕ ಶಿಕ್ಷಣ ಪರೀವೀಕ್ಷಕ ಲಿಂಗರಾಜ ಒಡೆಯರ್ ಸೇರಿದಂತೆ ಇತರರಿದ್ದರು.
- - --01ಕೆಪಿಸೊರಬ01: ಸೊರಬ ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. -01ಕೆಪಿಸೊರಬ02: ಸೊರಬ ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರಾವಳಿಯ ದೈವಿ ಕಲೆಯ ವೇಷದಲ್ಲಿ ಮಕ್ಕಳು ಗಮನ ಸೆಳೆದರು.