ರಾಜ್ಯ ಬಜೆಟ್ ಜಿಲ್ಲೆಗೆ ಅನ್ಯಾಯ ಕನ್ನಡ ಸಂಘಟನೆಗಳ ಆಕ್ರೋಶ

| Published : Feb 18 2024, 01:32 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿ ಖಾಲಿ ರಟ್ಟಿನ ಡಬ್ಬ ಪ್ರದರ್ಶಿಸಿ ಶನಿವಾರ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು

ಕನ್ನಡಪ್ರಭ ವಾರ್ತೆ ಚಾಮರಾಜನಗರಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿ ಖಾಲಿ ರಟ್ಟಿನ ಡಬ್ಬ ಪ್ರದರ್ಶಿಸಿ ಶನಿವಾರ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಇತ್ತೀಚೆಗೆ ನಗರದಲ್ಲಿ ಪ್ರತಿಭಟನೆ ನಡೆಸಿ, ಮುಂಬರುವ ಬಜೆಟ್‌ನಲ್ಲಿ ಮೇಕೆದಾಟು ಅಭಿವೃದ್ಧಿಗೆ ಸಾವಿರಾರು ಕೋಟಿ ರು.ಗಳು ಮೀಸಲಿಡಿ, ಚಾಮರಾಜನಗರಕ್ಕೆ ೨ನೇ ಹಂತದ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ವಿಶ್ವವಿದ್ಯಾಲಯ ಪುನಶ್ಚೇತನಕ್ಕೆ ೧೦೦ ಕೋಟಿ ರು. ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ ಯಾವ ಬೇಡಿಕೆಗೂ ಸ್ಪಂದಿಸಿಲ್ಲ ಜಿಲ್ಲೆಗೆ ಸಂಪೂರ್ಣ ಅನ್ಯಾಯ ಮಾಡಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಕರ್ನಾಟಕಕ್ಕೆ ಭೀಕರ ಬರಗಾಲ ಆವರಿಸುತ್ತಿದೆ. ಮಳೆ ಇಲ್ಲ, ಜಲಾಶಯಗಳು ಸಂಪೂರ್ಣ ಬತ್ತಿ ಹೋಗಿವೆ ಇಂತಹ ಸಂದರ್ಭದಲ್ಲೂ ನೀರು ಹರಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು. ಕೇಂದ್ರ ಸರ್ಕಾರಕ್ಕೆ ಒಕ್ಕೂಟದ ವ್ಯವಸ್ಥೆಯ ಮೇಲೆ ಗೌರವ ಇದ್ದರೆ, ಈಗಲಾದರೂ ಮಧ್ಯ ಪ್ರವೇಶ ಮಾಡಿ ಕಾವೇರಿ ನಿರ್ವಹಣಾ ಮಂಡಳಿಯನ್ನು ವಜಾಗೊಳಿಸಬೇಕು. ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವ ಮೂಲಕ ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಿಡಿಕಾರಿದರು. ಎಲ್ಲಿಯವರೆಗೆ ನೀವು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಗು.ಪುರುಷೋತ್ತಮ್, ಪಣ್ಯದಹುಂಡಿ ರಾಜು, ತಾಂಡವಮೂರ್ತಿ, ಲಿಂಗರಾಜು, ನಿಜಧ್ವನಿ ಗೋವಿಂದರಾಜ್, ಚಾ.ವೆಂ.ರಾಜ್‌ಗೋಪಾಲ್, ಚಾ.ರ.ಕುಮಾರ್, ಆಟೋ ನಾಗೇಶ್, ವೀರಭದ್ರ, ಮಹೇಶ್‌ಗೌಡ, ರವಿಚಂದ್ರ ಪ್ರಸಾದ್ ಇನ್ನಿತರರಿದ್ದರು.