ಮಕ್ಕಳ ಪ್ರತಿಭೆ ಹೊರತರಲು ಕನ್ನಡಪ್ರಭ ಉತ್ತಮ ಕಾರ್ಯ

| Published : Nov 23 2025, 02:30 AM IST

ಸಾರಾಂಶ

ಕನ್ನಡಪ್ರಭ ಸುದ್ದಿ ನೀಡುವ ಜತೆಗೆ ಸಮಾಜದ ಹಿತದ ಬಗೆಗೆ ಚಿಂತನೆ ಮಾಡುತ್ತಿದೆ. ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಕಾರ್ಯವೂ ನಡೆಯುತ್ತಿದೆ. ಕನ್ನಡಪ್ರಭ ಬಳಗ ಚಿತ್ರಕಲಾ ಸ್ಪರ್ಧೆ 7 ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ:

ಕಳೆದ 7 ವರ್ಷಗಳಿಂದ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಕ್ಕಳಲ್ಲಿ ಹುದಗಿರುವ ಪ್ರತಿಭೆ ಹೊರತರುವ ನಿಟ್ಟಿನಲ್ಲಿ ಚಿತ್ರಕಲಾ ಸ್ಪರ್ಧೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ಇಂದಿರಾ ಗಾಜಿನ ಮನೆಯಲ್ಲಿ ಶನಿವಾರ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ 7ನೇ ವರ್ಷದ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಸುಮಾರು ಮೂರು ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ವೇದಿಕೆ ಕಲ್ಪಿಸಿಕೊಡುತ್ತಿದೆ. 8,9,10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿ ಅವರಲ್ಲಿನ ಪ್ರತಿಭೆ ಅನಾವರಣ ಮಾಡಲು ಉತ್ತಮ ಅವಕಾಶ ಇದಾಗಿದೆ ಎಂದರು.

ಕನ್ನಡಪ್ರಭ ಸುದ್ದಿ ನೀಡುವ ಜತೆಗೆ ಸಮಾಜದ ಹಿತದ ಬಗೆಗೆ ಚಿಂತನೆ ಮಾಡುತ್ತಿದೆ. ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಕಾರ್ಯವೂ ನಡೆಯುತ್ತಿದೆ. ಕನ್ನಡಪ್ರಭ ಬಳಗ ಚಿತ್ರಕಲಾ ಸ್ಪರ್ಧೆ 7 ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕನ್ನಡಪ್ರಭ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಸತತ 7ನೇ ವರ್ಷದ ಕಾರ್ಯಕ್ರಮ ಆಯೋಜಿಸುವ ಮೂಲಕ ಮೊಬೈಲ್‌ ಗೀಳಿನಲ್ಲಿ ಮುಳುಗಿರುವ ಮಕ್ಕಳಲ್ಲಿ ಕ್ರಿಯಾಶೀಲತೆ, ಸ್ವಂತಿಕೆ ಬೆಳೆಸಲು ಇಂತಹ ಸ್ಪರ್ಧೆ ಆಯೋಜಿಸಲಾಗುತ್ತಿದೆ. 3000 ಮಕ್ಕಳು ಭಾಗವಹಿಸುವ ಮೂಲಕ ರಾಜ್ಯದಲ್ಲಿ ಇದೊಂದು ಅತಿ ದೊಡ್ಡ ಸ್ಪರ್ಧೆಯಾಗಿದೆ. ಈ ವರ್ಷ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಸುಮಾರು 3 ಲಕ್ಷ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಬೆಂಗಳೂರಿನಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಪ್ರಸಕ್ತ ವರ್ಷದ ಸ್ಪರ್ಧೆಗೆ ಚಿತ್ರಕಲಾ ಪರಿಷತ್‌, ಅರಣ್ಯ ಇಲಾಖೆ ಕೈ ಜೋಡಿಸಿದೆ. ಮಜೇಥಿಯಾ, ಸ್ವರ್ಣ ಗ್ರುಪ್‌ ಆಫ್‌ ಕಂಪನಿ, ಅಧಮ್ಯ ಚೇತನ, ಟ್ರ್ಯಾಕ್‌ ಆ್ಯಂಡ್‌ ಟ್ರಯಲ್‌, ಹ್ಯಾಂಗೋ ಐಸ್‌ ಕ್ರೀಂ, ಇಕೋ ವಿಲೇಜ್‌ ಸೇರಿದಂತೆ ಅನೇಕರು ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ಚಿತ್ರಕಲಾ ಸ್ಪರ್ಧೆ ಮಾತ್ರವಲ್ಲದೇ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ವತಿಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳಲ್ಲಿ ಪರೀಕ್ಷಾ ಭಯ ನಿವಾರಣೆ ಕಾರ್ಯಾಗಾರವನ್ನೂ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮಜೇಥಿಯಾ ಫೌಂಡೇಶನ್‌ನ ನಂದಿನ ಕಶ್ಯಪ್ ಮಜೇಥಿಯಾ, ಕಲಾವಿದ ಮಹಾದೇವ ಸತ್ತಿಗೇರಿ, ಟ್ರ್ಯಾಕ್‌ ಆ್ಯಂಡ್‌ ಟ್ರೈಲ್‌ನ ಸಿದ್ದಲಿಂಗಸ್ವಾಮಿ ಹಿರೇಮಠ, ಹ್ಯಾಂಗೋ ಐಸ್‌ಕ್ರೀಮ್‌ನ ಶ್ರೀಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರವಿ ಕುಲಕರ್ಣಿ ನಿರೂಪಿಸಿದರು.