ಕಸದ ಕೊಂಪೆಯಾಗುತ್ತಿದೆ ಮಂಗಳೂರು ಕನ್ನಡಪ್ರಭ ವರದಿಗೆ ಸಿಎಂ ಕಚೇರಿಯಿಂದ ಸ್ಪಂದನೆ

ಮಂಗಳೂರು: ಡಿ. 18 ರಂದು ಕನ್ನಡಪ್ರಭದಲ್ಲಿ ‘ಮತ್ತೆ ಕಸದ ಕೊಂಪೆಯಾಗುತ್ತಿರುವ ಮಂಗಳೂರು ನಗರ!’ ಶೀರ್ಷಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸಂಬಂಧಿಸಿ ಸ್ವತಃ ಮುಖ್ಯಮಂತ್ರಿಗಳ ಕಚೇರಿಯ ಪತ್ರಕ್ಕೆ ತುರ್ತು ಸ್ಪಂದಿಸಿದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಎರಡನೇ ದಿನದಲ್ಲಿ ಅನುಪಾಲನಾ ವರದಿಯನ್ನು ರವಾನಿಸಿದೆ.

ಮಂಗಳೂರು ಪಾಲಿಕೆಯಲ್ಲಿ ಕಸ ಸಂಗ್ರಹ, ವಿಲೇವಾರಿ ತೊಂದರೆಯಿಂದ ತಲೆ ಎತ್ತುತ್ತಿರುವ ಬ್ಲಾಕ್‌ ಸ್ಪಾಟ್‌ಗಳು, ಸ್ವಚ್ಛ ಮಂಗಳೂರಿನ ದಾರಿ ಎತ್ತ ಇತ್ಯಾದಿ ಅಂಶಗಳನ್ನು ವಿಶೇಷ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ವರದಿಗೆ ಸಂಬಂಧಿಸಿ ವಾಸ್ತವಾಂಶದ ಬಗ್ಗೆ ಆದ್ಯತೆ ಮೇರೆಗೆ ಪರಿಶೀಲಿಸಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು, ಜಿಪಿಎಸ್‌ ಛಾಯಾಚಿತ್ರಗಳೊಂದಿಗೆ ಅನುಪಾಲನಾ ವರದಿಯನ್ನು ಕೂಡಲೇ ಸಲ್ಲಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಡಿ. 22 ರಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಮಂಗಳೂರು ಪಾಲಿಕೆ ಆಯುಕ್ತರಿಗೆ ಪತ್ರವನ್ನು ಬರೆದು ವಿವರಣೆ ಕೋರಿದ್ದರು. ಈ ಬಗ್ಗೆ ಕೈಗೊಂಡಿರುವ ಕ್ರಮದ ಕುರಿತಂತೆ ಡಿ. 24 ರಂದು ಪಾಲಿಕೆ ಆಯುಕ್ತರು ಜಿಪಿಎಸ್‌ ಛಾಯಾಚಿತ್ರ ಸಮೇತ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಉತ್ತರ ನೀಡಿದ್ದಾರೆ. ಸಿಎಂಗೆ ಸಲ್ಲಿಸಿದ ಅನುಪಾಲನಾ ವರದಿಯಲ್ಲಿ ಏನಿದೆ?

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಅನುಸರಿಸುತ್ತಿರುವ ಕ್ರಮಗಳಬಗ್ಗೆ ಅನುಪಾಲನಾ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.1) ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ವಿಲೇವಾರಿಗಾಗಿ ಸ್ವಚ್ಛತಾ ಕಾರ್ಯಗಳಿಗಾಗಿ ಪಾಲಿಕೆಯ 302 ಕಾಯಂ ಪೌರಕಾರ್ಮಿಕರು, 441 ನೇರ ಪಾವತಿ ಅಡಿಯಲ್ಲಿ ಪೌರಕಾರ್ಮಿಕರು ಹಾಗೂ 323 ಹೊರಗುತ್ತಿಗೆ ನೌಕರರು (ಡ್ರೈವರ್ಸ್, ಲೋಡರ್ಸ್ & ಹೆಲ್ಸರ್ಸ್) ಇತರೆ ಸ್ವಚ್ಛತಾ ಸಿಬ್ಬಂದಿ ಮೂಲಕ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

2) ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಚ್ಛ ಭಾರತ ಅನುದಾನದಡಿ ಖರೀದಿಸಲಾಗಿರುವ 177 ವಾಹನಗಳನ್ನು ನಿಯೋಜಿಸಿ ಪಾಲಿಕೆ ವ್ಯಾಪ್ತಿಯಲ್ಲಿನ 60 ವಾರ್ಡ್‌ಗಳಲ್ಲಿ ಪ್ರಾಥಮಿಕ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯಕ್ಕೆ ತೊಡಗಿರುವ ವಾಹನಗಳ ಮೂಲಕ ಮನೆ-ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ತ್ಯಾಜ್ಯವನ್ನು ಹಸಿ ಹಾಗೂ ಒಣ ತ್ಯಾಜ್ಯವಾಗಿ ವಿಂಗಡಿಸಿ ಪಚ್ಚನಾಡಿಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮುಂದಿನ ಸಂಸ್ಕರಣೆಗಾಗಿ ಸಾಗಿಸಲಾಗುತ್ತಿದೆ.

3) ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಅಂದಾಜು 310 ರಿಂದ 330 ಟನ್ ವರೆಗೆ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ತ್ಯಾಜ್ಯ ವಿಂಗಡಣೆ ಕುರಿತಂತೆ ಕಟ್ಟುನಿಟ್ಟಾಗಿ ಕ್ರಮವಹಿಸಲಾಗುತ್ತಿರುವ ಕಾರಣ, ಶೇ. 70 ರಷ್ಟು ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ವಿಂಗಡಣೆಯಾಗಿ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ4) ಮಂಗಳೂರು ಮಹಾನಗರ ಪಾಲಿಕೆಯ ವಿವಿಧ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ಬಿಸಾಡುವವರನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಲು ತಾಂತ್ರಿಕವಾಗಿ ಕಾರ್ಯಸಾಧ್ಯವಾದ ಮತ್ತು ಸುಸ್ಥಿರ ಪರಿಹಾರವನ್ನು ಕಂಡುಹಿಡಿಯುವ ಹಿನ್ನೆಲೆಯಲ್ಲಿ ಸೌರಶಕ್ತಿಚಾಲಿತ 60 ಸಿಸಿಟಿವಿ ಕ್ಯಾಮರಾಗಳನ್ನು Garbage Vulnerable Point ಗಳಲ್ಲಿ ಅಳವಡಿಸಲಾಗಿದೆ. ಈ ಕ್ಯಾಮರಾಗಳ ಫೂಟೋಜ್‌ಗಳನ್ನು ವೀಕ್ಷಿಸಲು ಎಲ್ಲ ಆರೋಗ್ಯ ನಿರೀಕ್ಷಕರಿಗೆ ಮತ್ತು ಪರಿಸರ ಅಭಿಯಂತರರಿಗೆ ಲಾಗಿನ್ ಗಳನ್ನು ನೀಡಲಾಗಿದೆ.5) ಮಂಗಳೂರು ಸ್ಮಾರ್ಟ್ ಸಿಟಿ ಅಮಿಟೆಡ್ ವತಿಯಿಂದ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿ ನಿರ್ವಹಿಸಲಾಗುತ್ತಿರುವ Integrated Command Control Centre ನಲ್ಲಿ ನಿರಂತರ ಮೇಲ್ವಿಚಾರಣೆ ಮಾಡಬಹುದಾಗಿರುತ್ತದೆ. ಈ ಫುಟೋಜ್‌ಗಳನ್ನು ಮೊಬೈಲ್ ಅಪ್ಲಿಕೇಷನ್ ಮುಖಾಂತರವೂ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಅದಲ್ಲದೆ ತ್ಯಾಜ್ಯ ಬಿಸಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಾಹನ ಸಂಖ್ಯೆಯ ಮಾಹಿತಿ ನೀಡುವಂತೆ ಹಾಗೂ ತ್ಯಾಜ್ಯ ಬಿಸಾಡುವವರಿಗೆ ದಂಡವನ್ನು ಪಾವತಿಸುವಂತೆ ಸಂಬಂಧಪಟ್ಟ ಪೋಲೀಸ್ ಠಾಣೆಗಳಿಗೆ ಪತ್ರವನ್ನು ಸಹ ರವಾನಿಸಲಾಗುತ್ತಿದೆ. ಇದರೊಂದಿಗೆ ತ್ಯಾಜ್ಯ ಬಿಸಾಡುವವರ ಛಾಯಾಚಿತ್ರ ಬಳಸಿ ಬ್ಯಾನರ್‌ಗಳನ್ನು ಮಾಡಿಸಿ, ಹಲವೆಡೆ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಗಮನಾರ್ಹ ಮಟ್ಟದಲ್ಲ ಬ್ಲ್ಯಾಕ್ ಸ್ಪಾಟ್‌ಗಳು ಕಡಿಮೆಯಾಗಿರುತ್ತದೆ.6) ಕೆಲವೊಂದು ಭಾಗಗಳಲ್ಲಿ ಪ್ರತಿ ದಿನ ಮನೆ-ಮನೆಯಿಂದ ತಾಜ್ಯ ಸಂಗ್ರಹಣೆ ಮತ್ತು ಸಾಗಣಿಕೆ ಕಾರ್ಯದಲ್ಲಿ ತೊಡಗಿರುವ ವಾಹನಗಳು ದುರಸ್ಥಿ ಮತ್ತು ನಿರ್ವಹಣೆಯ ಅಗತ್ಯಬಿದ್ದ ಸಮಯದಲ್ಲಿ ತ್ಯಾಜ್ಯ ಸಂಗ್ರಹಣೆ ವಿಳಂಬವಾಗುವುದು ಕಂಡುಬಂದಲ್ಲಿ ಕೂಡಲೇ ಬದಲಿ ವಾಹನ ವ್ಯವಸ್ಥೆಗೊಳಿಸಿ ಅಂತಹ ಪ್ರದೇಶಗಳಲ್ಲಿ ತುರ್ತಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ.7) ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ 02 ಸಂಖ್ಯೆಯ ಎಲ್‌ಇಡಿ ಡಿಸ್‌ಪ್ಲೇ ಅಳವಡಿಸಿರುವ ಮೂಲಕ ಸಾರ್ವಜನಿಕರಿಗೆ ತ್ಯಾಜ್ಯ ವಿಂಗಡಣೆಯ ಹಾಗೂ ಸಂಸ್ಕರಣೆಯ ಕುರಿತಂತೆ ಇತರೆ ಘನ ತ್ಯಾಜ್ಯ ನಿರ್ವಹಣೆ ಕುರಿತಾದ ಮಾಹಿತಿ ನೀಡಲಾಗುತ್ತಿದೆ.8) ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳು, ಪ್ಲಾಸ್ಟಿಕ್ ಉತ್ಪಾದನಾ ಕಾರ್ಖಾನೆಗಳು, ಅಂಗಡಿ ಮುಂಗಟ್ಟುಗಳ ಬೀದಿ ಬದಿ ವ್ಯಾಪಾರಸ್ಥರಿಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸದೆ ಇರುವುದು ಕಂಡು ಬಂದಲ್ಲಿ ಆರೋಗ್ಯ ನಿರೀಕ್ಷಕರಿಂದ ನಿರಂತರವಾಗಿ ಪ್ಲಾಸ್ಟಿಕ್‌ ರೈಡ್‌ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಹಾಗೂ ದಂಡವನ್ನು ವಿಧಿಸಲಾಗುತ್ತಿದೆ.

9) ನಗರವನ್ನು ಸುಂದರೀಕರಣಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಗೋಡೆ ಬರಹಗಳನ್ನು ಹಾಗೂ ಚಿತ್ರಗಳನ್ನು ಬಿಡಿಸಲಾಗಿದೆ.

10) ಘನ ತ್ಯಾಜ್ಯ ನಿರ್ವಹಣೆಯ ಕಾರ್ಯನಿರತ ಪೌರ ಕಾರ್ಮಿಕರಿಗೆ ಹಾಗೂ ಇತರೆ ಸ್ವಚ್ಛತಾ ಸಿಬ್ಬಂದಿಗೆ ಸಮರ್ಪಕ ತ್ಯಾಜ್ಯ ನಿರ್ವಹಣೆಯ ಕುರಿತು ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.11) ಸ್ವಚ್ಛ ಭಾರತ್ ಮಿಷನ್ -2.0 ಯೋಜನೆಯಡಿಯಲ್ಲಿ ಸ್ವ-ಸಹಾಯ ಗುಂಪುಗಳಿಂದ COMMUNITY MOBILIZERS ಗಳನ್ನು ನೇಮಿಸಿ ಮನೆ-ಮನೆ ಬೇಟಿ ಮೂಲಕ ತ್ಯಾಜ್ಯ ವಿಂಗಡಣೆ ಕುರಿತಂತೆ ಸಾರ್ವಜನಿಕರಿಗೆ ನಿರಂತರವಾಗಿ ಮಾಹಿತಿ ನೀಡಲಾಗುತ್ತಿದೆ.