ಸಾರಾಂಶ
ತುಮಕೂರು : ತನ್ನ ತಂದೆ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ ಗೋಪಾಲ್ ವೈ. ಆರ್. ತುಮಕೂರು ವಿವಿಯ ಸ್ನಾತಕೋತ್ತರ "ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ " ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಸದ್ಯ "ಕನ್ನಡಪ್ರಭ " ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗಾರೆ ಕೆಲಸ ಮಾಡುತ್ತಿದ್ದ ಗೋಪಾಲ್ ಒಲಿದ ಚಿನ್ನ: ತುಮಕೂರು ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗೋಪಾಲ್‌ಗೆ ಬುಧವಾರ ಚಿನ್ನದ ಪದಕ ನೀಡಿದರು. ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯ ರಾಮಲಿಂಗಪ್ಪ ಮತ್ತು ಸಿದ್ಧಗಂಗಮ್ಮ ದಂಪತಿಯ ಕೊನೆಯ ಪುತ್ರನಾದ ಜನಿಸಿದ ಗೋಪಾಲ್ ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದರು. ಆಗಲೇ ಅಪ್ಪನ ಜೊತೆ ಬದುಕಿನ ನೊಗ ಹೊರಲು ಗಾರೆ ಕೆಲಸಕ್ಕೆ ಹೋಗಿ, ಅಂಚೆ ಮೂಲಕ ಪಿಯುಸಿ ಮುಗಿಸಿದ ಗೋಪಾಲ್ ತುಮಕೂರು ವಿವಿಯಲ್ಲಿ ಪದವಿಗೆ ಸೇರಿದರು. ಬಳಿಕ ಸ್ನಾತಕೋತ್ತರ ಪದವಿ ಪಡೆದು ಕಳೆದ ವರ್ಷ ನವೆಂಬರ್ 6 ರಂದು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಕನ್ನಡಪ್ರಭಕ್ಕೆ ಉಪ ಸಂಪಾದಕನಾಗಿ ಸೇರಿದರು.ಅಂದು ಪಿಯುಸಿಯಲ್ಲಿ ಫೇಲ್ ಆಗಿದ್ದ ಗೋಪಾಲ್ ಈಗ ಚಿನ್ನದ ಪದಕ ಪಡೆಯುವ ಮೂಲಕ ಸ್ಪೂರ್ತಿಯಾಗಿದ್ದಾರೆ. ತಮ್ಮ ಈ ಸಾಧನೆಗೆ ಗುರುಗಳಾದ ಸಿಬಂತಿ ಪದ್ಮನಾಭ ಕಾರಣ ಎಂದು ಹೆಮ್ಮೆಯಿಂದ ಹೇಳುತ್ತಾರೆ ಗೋಪಾಲ್.
ಕನ್ನಡಪ್ರಭ ಸಿಬ್ಬಂದಿಯಿಂದ ಶುಭಾಶಯ ಮಹಾಪೂರ: ಗೋಪಾಲ್‌ನ ಈ ಸಾಧನೆಗೆ ಕನ್ನಡಪ್ರಭ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ವೆಂಕಟಸುಬ್ಬಯ್ಯ ಸರ್, ಎಂ.ನಟರಾಜ್, ಸುಬ್ರಮಣ್ಯ, ದೇವದತ್ತಿ ಜೋಶಿ, ಸಹದ್ಯೋಗಿಗಳಾದ ನಚಿಕೇತನ್ ಎನ್., ವಿರೇಶ ಉಳ್ಳಾಗಡ್ಡಿ, ಬಸವರಾಜ ತೋಟರ್, ರಾಜಗುರು ಬೋಲುರಮಠ, ಸಂಜೀವ ಅಂಗಡಿ, ಶಿವರಾಜ್, ವಿಶ್ವನಾಥ್ ಇತರರು ಶುಭಕೋರಿದ್ದಾರೆ.