ಹಾಸನ ನಗರದ ಹೊರವಲಯದಲ್ಲಿರುವ ನವ್ಕೀಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 2ರಂದು ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ "ಕಲ್ಪ " ಪ್ರಯೋಗಾಲಯದ ಉದ್ಘಾಟನೆ ಮಾಡಲಾಗುವುದು.
ಕನ್ನಡಪ್ರಭ ವಾರ್ತೆ ಹಾಸನ ಹಾಸನ ನಗರದ ಹೊರವಲಯದಲ್ಲಿರುವ ನವ್ಕೀಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 2ರಂದು ಕನ್ನಡ ರಾಜ್ಯೋತ್ಸವ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ "ಕಲ್ಪ " ಪ್ರಯೋಗಾಲಯದ ಉದ್ಘಾಟನೆ ಮಾಡಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಎಚ್.ಎಸ್. ಮೋಹನ ತಿಳಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 2ರಂದು ಮಧ್ಯಾಹ್ನ ೩ ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಡಾ. ಕೆ. ಚಿದಾನಂದಗೌಡ ಅವರು ಉದ್ಘಾಟಿಸಲಿದ್ದಾರೆ. ಈ ಪ್ರಯೋಗಾಲಯದಲ್ಲಿ ಕನ್ನಡದಲ್ಲಿಯೇ ಗಣಕಯಂತ್ರದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲಾಗುವುದು. ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಜತೆ ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡು ಕಂಪ್ಯೂಟರ್ ತಂತ್ರಾಂಶಗಳನ್ನು ಕನ್ನಡದಲ್ಲಿಯೇ ಅಭಿವೃದ್ಧಿಪಡಿಸಲಿದ್ದಾರೆ. ಎಲ್ಲಾ ತಂತ್ರಾಂಶಗಳು ಇಂಗ್ಲೀಷಿನಲ್ಲಿ ಇರುವುದರಿಂದ ಕೆಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅದರಿಂದ ದೂರ ಉಳಿಯಬಹುದು. ಹಾಗಾಗಿ ಅದೇ ತಂತ್ರಾಂಶ ಕನ್ನಡದಲ್ಲಿ ಅಭಿವೃದ್ಧಿಯಾದರೆ ಎಲ್ಲರಿಗೂ ಅರ್ಥವಾಗುತ್ತದೆ. ಹಾಗಾಗಿ ಕನ್ನಡ ರಾಜ್ಯೋತ್ಸವದ ಈ ಸುದಿನದ ಕೊಡುಗೆಯಾಗಿ ಈ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡುತ್ತಿರುವುದಾಗಿ ಮೋಹನ ಹೇಳಿದರು. ಎಂಸಿಎ ವಿಭಾಗ ಆರಂಭ: ಎಂ.ಎಸ್ ರಾಮಯ್ಯ ಇನ್ಸ್‌ಸ್ಟಿಟ್ಯೂಷನ್ ಅಡಿಯಲ್ಲಿ ನಡೆಯುತ್ತಿರುವ ನವ್ಕೀಸ್ ಕಾಲೇಜಿನಲ್ಲಿ ಈ ಶೈಕ್ಷಣಿಕ ಸಾಲಿನಿಂದ ಮಾಸ್ಟರ್ ಇನ್ ಕಂಪ್ಯೂಟರ್ ಅಪ್ಲಿಕೇಷನ್ (ಎಂಸಿಎ) ವಿಭಾಗ ಆರಂಭಿಸಲಾಗಿದೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು)ನಿಂದಲೂ ಅನುಮತಿ ಸಿಕ್ಕಿದೆ. ನಮ್ಮ ಕಾಲೇಜಿನಲ್ಲಿ ಈ ವಿಭಾಗವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಅನುಮೋದಿಸಲಾಗಿದೆ. ಈ ಕೋರ್ಸ್ ಐಟಿ ವಲಯಕ್ಕೆ ಸೇರಬಯಸುವ ಪ್ರತಿಯೊಬ್ಬರಿಗೂ ಅತ್ಯುತ್ತಮ ವೃತ್ತಿ ಆಯ್ಕೆಯನ್ನು ಒದಗಿಸುತ್ತದೆ. ಈ ವಿದ್ಯಾರ್ಹತೆಗೆ ಸರ್ಕಾರಿ ಸಂಸ್ಥೆಗಳಲ್ಲಿ ಕೂಡ ಅನೇಕ ವೃತ್ತಿಪರ ಅವಕಾಶಗಳಿವೆ. ಮ್ಯಾನೇಜ್ ಮೆಂಟ್ ಕೋಟಾದಡಿ ಸೇರುವ ವಿದ್ಯಾರ್ಥಿಗಳಿಗೆ ಕೂಡ ಹೆಚ್ಚಿನ ಶುಲ್ಕದ ಹೊರೆ ಇರುವುದಿಲ್ಲ. ಏಕೆಂದರೆ ಸಿಇಟಿ ಶುಲ್ಕ ಏನಿದೆಯೋ ಅಷ್ಟೇ ಶುಲ್ಕ ಭರಿಸಿದರೆ ಸಾಕು ಎಂದು ಉಪ ಪ್ರಾಂಶುಪಾಲೆ ಡಾ.ಎ.ಎಸ್.ಮೈನಾ ಮಾಹಿತಿ ನೀಡಿದರು. ನವ್ಕೀಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪದವೀಧರರನ್ನಾಗಿ ಮಾಡುವುದರ ಜತೆಗೆ ಅತ್ಯುತ್ತಮ ಉದ್ಯೋಗ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತಿದೆ. ಇದರ ಫಲವಾಗಿ ಶೇ.50ರಷ್ಟು ಪದವೀಧರರು ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಗಿಟ್ಟಿಸಿದ್ದು, ಹೊರ ದೇಶದಲ್ಲಿ ಕೂಡ ನಮ್ಮ ವಿದ್ಯಾರ್ಥಿಗಳು ಕೆಲಸ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಮೇಶ್ ಓಬಳಪ್ಪ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.