ಸಾರಾಂಶ
, ರಾಜ್ಯೋತ್ಸವ ಎಂಬುದು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು.
ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮ ಮಾತೃಭಾಷೆಯ ಬಗೆಗೆ ಅಭಿಮಾನವಿರಬೇಕು. ಕನ್ನಡ ಎದೆಯಾಳಾದ ಧ್ವನಿಯಾಗಬೇಕು. ಕೊನೆ ಪಕ್ಷ ತಮ್ಮ ಹೆಸರು, ಸಹಿಯನ್ನು ಕನ್ನಡದಲ್ಲಿ ಮಾಡಬೇಕು ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ತಿಳಿಸಿದರು.ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗವು ಶನಿವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯೋತ್ಸವ ಎಂಬುದು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಹಾಗೆಯೇ, ಕೇವಲ ಆಚರಣೆಗಾಗಿ ಆಚರಣೆಯಾಗಬಾರದು ಎಂದರು.ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷಗಳಾಗಿವೆ. ಒಕ್ಕೊರಲಿನಿಂದ ನಾವು ಕನ್ನಡಿಗರೆಂದು ಹೆಮ್ಮೆಯಿಂದ ಹೇಳಬೇಕು. ಹೊಸ ಇತಿಹಾಸವನ್ನು ಕಟ್ಟುವಲ್ಲಿ ಕನ್ನಡಿಗರು ಮುನ್ನಡೆಯಬೇಕು. ವರ್ತಮಾನದ ಸಂಗತಿಗಳಿಗೆ ನಾವು ಹೆಚ್ಚು ಆದ್ಯತೆ ಕೊಡಬೇಕು. ಪರಂಪರೆಯನ್ನು ಕಟ್ಟಿಕೊಳ್ಳುವಲ್ಲಿ ಕನ್ನಡಿಗರ ಪಾತ್ರ ಹಿರಿದಾಗಿರಬೇಕು ಎಂದು ಅವರು ಆಶಿಸಿದರು.ಮೊದಲ ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು. 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ಕರ್ನಾಟಕ, ಕರುನಾಡು, ಕಮ್ಮಿತುನಾಡು, ಕಪ್ಪಾದಭೂಮಿ ಮುಂತಾದ ಹೆಸರುಗಳಿವೆ. ಮೈಸೂರನ್ನು ಮೊದಲ ಮಹಿಷ ಮಂಡಲ, ವಿಶಾಲ ಮೈಸೂರು, ಮೈಸೂರು ರಾಜ್ಯ ಎಂದು ಕರೆಯುತ್ತಿದ್ದರು. ಕರ್ನಾಟಕ ಎಂಬುದು ಜನಪ್ರತಿನಿಧಿತ್ವವನ್ನು ಸೂಚಿಸುತ್ತದೆ. ಮೈಸೂರಿನವರ ತ್ಯಾಗ ಮನೋಭಾವನೆಯಿಂದ ಕರ್ನಾಟಕ ಎಂದು ಬದಲಾಯಿತು. ಭೌಗೊಳಿಕವಾಗಿ ಕನ್ನಡಿಗತು ಒಂದಾದರೆ ಸಾಲದು ಭಾವನಾತ್ಮಕವಾಗಿ ಒಂದಾಗಬೇಕು ಎಂದು ಅವರು ಹೇಳಿದರು.ಆನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ, ಶ್ರೀ ನಟರಾಜ ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸುನೀತಾರಾಣಿ ಇದ್ದರು. ಐಶ್ವರ್ಯ ಸ್ವಾಗತಿಸಿದರು. ಕುಸುಮಾ ವಂದಿಸಿದರು. ನಿತ್ಯಾ ನಿರೂಪಿಸಿದರು.----ಕೋಟ್...ರಾಜಶಾಹಿಗಳು ಪರಂಪರೆಯನ್ನು ಕಸಿಕಟ್ಟುವ ಪ್ರಯತ್ನ ಮಾಡಿ ಯಶಸ್ವಿಯಾದರು. ಅದು ವಿವಿಧ ಹಬ್ಬಗಳಾಗಿ ನಮ್ಮಲ್ಲಿ ಆಚರಣೆಗಳಾದವು. ಮನೆಯೊಳಗಿನ ಕಾರ್ಯವಾಯಿತು. ಆದರೆ, ಸರ್ಕಾರಗಳು ಮನೆಯ ಹೊರಗಿನ ಕಾರ್ಯಗಳನ್ನು ಮಾಡುತ್ತವೆ. ಪರಂಪರೆಯನ್ನು ಕಸಿಕಟ್ಟುವ ಮನೆಯೊಳಗಿನ ಕಾರ್ಯವನ್ನು ಮಾಡಬೇಕು. ತನ್ನದೇ ಭಾಷೆ, ಸ್ವನಾಡು, ಸ್ವಧರ್ಮವನ್ನು ಕಟ್ಟಿಕೊಳ್ಳುವುದರಿಂದ ನಾವೆಲ್ಲರೂ ಒಂದೇ ಎಂಬ ಐಕ್ಯತೆಯ ಭಾವನೆ ಉಂಟಾಗುತ್ತದೆ.- ಪ್ರೊ. ಅರವಿಂದ ಮಾಲಗತ್ತಿ, ಸಾಹಿತಿ