ಸಾರಾಂಶ
ಚಿತ್ರದುರ್ಗ: ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಮಟ್ಟದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧ್ಯಕ್ಷೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಇದಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸ್ವಾಗತ, ಹಣಕಾಸು, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ವೇದಿಕೆ ಸಮಿತಿಗಳನ್ನು ರಚಿಸಲಾಗಿದೆ. ನವೆಂಬರ್ ಒಂದರಂದು ಬೆಳಿಗ್ಗೆ 7.30 ಗಂಟೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಬಳಿಕ ಬೆಳಿಗ್ಗೆ 9 ಗಂಟೆಗೆ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಅನುವಾಗುವಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗುವುದು. ಸ್ವಾಗತ ಸಮಿತಿ ಶಿಷ್ಟಾಚಾರದ ಅನುಸಾರ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಬೇಕು. ಆಯಾ ತಾಲೂಕುಗಳ ತಹಸೀಲ್ದಾರರು ತಮ್ಮ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸಿ, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಜಿಲ್ಲಾ ಪಂಚಾಯಿತಿ ಸಿಇಓ ನೇತೃತ್ವದಲ್ಲಿ ಹಣಕಾಸು ಸಮಿತಿ ರಚಿಸಲಾಗಿದ್ದು, ಸಮಿತಿಯ ಎಲ್ಲಾ ಸದಸ್ಯ ಅಧಿಕಾರಿಗಳು ಕಾರ್ಯಕ್ರಮ ಆಯೋಜನೆಗೆ ಅಗತ್ಯವಿರುವ ಖರ್ಚು ವೆಚ್ಚಗಳನ್ನು ಭರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸ್ಥಬ್ಧಚಿತ್ರ ಸಮಿತಿ ರಚಿಸಲಾಗಿದೆ. ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿಯಿಂದ ಸರ್ಕಾರದ ಸಾಧನೆ ಹಾಗೂ ಯೋಜನೆಗಳನ್ನು ಬಿಂಬಿಸುವ ವೈವಿಧ್ಯಮಯ ಸ್ತಬ್ಧಚಿತ್ರಗಳನ್ನು ನಿರ್ಮಿಸಿ, ರಾಜ್ಯೋತ್ಸವ ದಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ದಸರಾ ಮೆರವಣಿಗೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಜಿಲ್ಲೆಯ ಸ್ತಬ್ಧಚಿತ್ರವನ್ನೂ ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದರು. ನವೆಂಬರ್ 01 ರಂದು ಬೆಳಿಗ್ಗೆ 7.30ಕ್ಕೆ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಗರದ ನೀಲಕಂಠೇಶ್ವರದ ದೇಗುಲದಿಂದ ಹೊರಟು, ಪ್ರಮುಖ ರಸ್ತೆ ಮೂಲಕ ರಾಜ್ಯೋತ್ಸವ ಸಮಾರಂಭ ಜರುಗುವ ಪೊಲೀಸ್ ಕವಾಯತು ಮೈದಾನದವರೆಗೆ ಸಾಗಿ ಬರಲಿದೆ. ತೋಟಗಾರಿಕೆ ಇಲಾಖೆ ಹಳದಿ ಮತ್ತು ಕೆಂಪು ಹೂಗಳ ಗಿಡಗಳಿಂದ ವೇದಿಕೆ ಸಿಂಗರಿಸಬೇಕು. ನಗರಸಭೆಯಿಂದ ಪೊಲೀಸ್ ಕವಾಯತು ಮೈದಾನವನ್ನು ಸ್ವಚ್ಛಗೊಳಿಸಿ, ಧ್ವಜಸ್ಥಂಭ ಸಿದ್ಧಪಡಿಸಬೇಕು. ಇದರೊಂದಿಗೆ ಮಕ್ಕಳು ಹಾಗೂ ಸಾರ್ವಜನಿಕರಿಗೆ ಶಾಮಿಯಾನ ವ್ಯವಸ್ಥೆ ಮಾಡಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಶಿಷ್ಟಾಚಾರದ ಪ್ರಕಾರ ಧ್ವಜಗಳನ್ನು ಕಟ್ಟಬೇಕು ಎಂದು ತಿಳಿಸಿದರು. ಕೃಷಿ, ಕ್ರೀಡೆ, ಸಮಾಜ ಸೇವೆ, ಶಿಕ್ಷಣ ಮತ್ತು ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದ, ಮಾಧ್ಯಮ ಮತ್ತು ಛಾಯಾಗ್ರಹಣ, ವೈದ್ಯಕೀಯ ಮತ್ತು ಸಂಶೋಧನೆಯಲ್ಲಿ ಗಣನೀಯ ಸಾಧನೆಗೈದ ಜಿಲ್ಲೆಯ ಮಹನೀಯರನ್ನು ಸನ್ಮಾನಿಸಲು ಉಪವಿಭಾಗಾಧಿಕಾರಿಗಳ ನೇತೃತ್ವದ ಜಿಲ್ಲಾಮಟ್ಟದ ಆಯ್ಕೆ ಸಮಿತಿ ರಚಿಸಲಾಗಿದೆ. ಸಾಧಕರ ಆಯ್ಕೆ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಎಲ್ಲಾ ಸಮಿತಿಗಳು ಅಚ್ಚುಕಟ್ಟಾಗಿ ನಿರ್ವಹಿಸಿ, ರಾಜ್ಯೋತ್ಸವ ಆಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಡಿ.ಆರ್.ವಿಭಾಗದ ಡಿವೈಎಸ್ಪಿ ಶ್ರೀನಿವಾಸ್, ಆಹಾರ ಇಲಾಖೆ ಉಪನಿರ್ದೇಶಕ ಸಿದ್ರಾಮ ಮಾರಿಹಾಳ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ಗುರುನಾಥ್, ತಹಸೀಲ್ದಾರ್ ಗೋವಿಂದರಾಜು ಸಭೆಯಲ್ಲಿ ಹಾಜರಿದ್ದರು.