ರೈಲ್ವೆ ನೌಕರರ ಕನ್ನಡ ಬಳಗದಿಂದ ಕನ್ನಡ ರಾಜ್ಯೋತ್ಸವ

| Published : Nov 18 2024, 12:01 AM IST

ರೈಲ್ವೆ ನೌಕರರ ಕನ್ನಡ ಬಳಗದಿಂದ ಕನ್ನಡ ರಾಜ್ಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನೂರಾರು ರೈಲ್ವೆ ನೌಕರರು ಹಾಗೂ ಕನ್ನಡ ಅಭಿಮಾನಿಗಳು ರಕ್ತದಾನ ಮಾಡಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಿದರು. ನಂತರ ಧ್ವಜಾರೋಹಣವನ್ನು ರೈಲ್ವೆ ವಿಭಾಗೀಯ ವೈದ್ಯಾಧಿಕಾರಿಗಳಾದ ಡಾ. ಅತೀರಾರವರು ನೆರವೇರಿಸಿದರು. ರಕ್ತದಾನ ಮಾಡಿದ ದಾನಿಗಳನ್ನು ರೈಲ್ವೆ ನೌಕರರ ಕನ್ನಡ ಬಳಗದ ಅಧ್ಯಕ್ಷ ಹಾಗೂ ರೈಲು ಚಾಲಕ ಮಂಜು ಸಿ.ರವರು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರೈಲ್ವೆ ನೌಕರರ ಕನ್ನಡ ಬಳಗದ ವತಿಯಿಂದ ಅರ್ಥಪೂರ್ಣ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕುವೆಂಪು ವೇಗದೂತ ರೈಲುಗಾಡಿಯನ್ನು ಕನ್ನಡ ಬಾವುಟಗಳನ್ನು ಕಟ್ಟಿ ತಳಿರುತೋರಣಗಳಿಂದ ಶೃಂಗಾರ ಮಾಡಿ ಪೂಜಿ ಸಲ್ಲಿಸಿ ಕನ್ನಡಾಂಬೆಗೆ ಜೈಕಾರ ಹಾಕುವುದರ ಮುಖಾಂತರ ಉದ್ಘಾಟಿಸಲಾಯಿತು.

ನೂರಾರು ರೈಲ್ವೆ ನೌಕರರು ಹಾಗೂ ಕನ್ನಡ ಅಭಿಮಾನಿಗಳು ರಕ್ತದಾನ ಮಾಡಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಿದರು. ನಂತರ ಧ್ವಜಾರೋಹಣವನ್ನು ರೈಲ್ವೆ ವಿಭಾಗೀಯ ವೈದ್ಯಾಧಿಕಾರಿಗಳಾದ ಡಾ. ಅತೀರಾರವರು ನೆರವೇರಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೈಲ್ವೆ ನಿಲ್ದಾಣ ವ್ಯವಸ್ಥಾಪಕರಾದ ಸತೀಶ್ ಕುಮಾರ್, ಕರ್ನಾಟಕ ಏಕೀಕರಣಗೊಂಡು 67 ವರ್ಷಗಳು ಸಂದಿವೆ. ಮೈಸೂರು ಸಂಸ್ಥಾನಕ್ಕೆ ಇನ್ನೂ ಹಲವು ಜಿಲ್ಲೆಗಳನ್ನು ಸೇರಿಸಿ 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಕನ್ನಡ ಭಾಷೆಯನ್ನು ಬಳಸುವುದಕ್ಕೆ ಸಂತೋಷವಾಗುತ್ತದೆ. ನಾಡಿನೆಲ್ಲೆಡೆ ನವಂಬರ್‌ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ ನಮ್ಮ ಎಲ್ಲಾ ನೌಕರರು ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸುವುದಕ್ಕೆ ಸಂತಸವಾಗಿದೆ ಎಂದರು.

ಕರವೇ ತಾಲೂಕು ಅಧ್ಯಕ್ಷ ಹೇಮಂತ ಕುಮಾರ್‌ ಮಾತನಾಡಿ, ಎರಡು ಸಾವಿರ ವರ್ಷ ಇತಿಹಾಸವಿರುವ ಜಗತ್ತಿನಲ್ಲಿ ಅತ್ಯಂತ ಸುಂದರ ಲಿಪಿಯನ್ನು ಹೊಂದಿರುವ ಕನ್ನಡವನ್ನು ಹೆಚ್ಚು ಹೆಚ್ಚು ಮಾತನಾಡುವುದರ ಮುಖಾಂತರ ಬೆಳೆಸಬೇಕಿದೆ. ಹಾಗೂ ಇಲ್ಲಿ ಉದ್ಯೋಗಕ್ಕೆ ಬಂದಂತಹ ಅನ್ಯಭಾಷಿಕರಿಗೂ ಕನ್ನಡವನ್ನು ಕಲಿಸಿ ಮಾತೃ ಭಾಷೆಯಾದ ಕನ್ನಡವನ್ನು ನಾವು ಅನ್ಯ ರಾಜ್ಯಗಳಿಗೂ ಹರಡಬೇಕಿದೆ. ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡರ ನೇತೃತ್ವದಲ್ಲಿ ಈ ನಾಡಿನ ಲಕ್ಷಾಂತರ ಯುವಕರು ಈ ನಾಡಿನ ಭಾಷೆ. ನೆಲ. ಜಲಗಳಿಗೆ ಅನ್ಯಾಯವಾದಲ್ಲಿ ಹೋರಾಟ ಮಾಡಲು ಸಿದ್ಧವಿದ್ದೇವೆ. ರಾಜ್ಯೋತ್ಸವ ದಿನವನ್ನು ಕೆಂಪು ಮತ್ತು ಹಳದಿ ಕನ್ನಡ ಧ್ವಜದ ಮೂಲಕ ಅತ್ಯಂತ ಸಂತೋಷ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ. ರಾಷ್ಟ್ರಕವಿ ಕುವೆಂಪುರವರಿಂದ ರಚಿತವಾದ ''''''''ಜಯ ಭಾರತ ಜನನೀಯ ತನುಜಾತೆ, ಜಯಹೇ ಕರ್ನಾಟಕ ಮಾತೆ'''''''' ಹಾಡುವುದರೊಂದಿಗೆ ಈ ದಿನದಂದು ಕನ್ನಡದ ಹಬ್ಬವನ್ನು ಎಲ್ಲಾ ರೈಲ್ವೆ ನೌಕರರು ಅದ್ಧೂರಿಯಾಗಿ ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಸಮಾರಂಭದಲ್ಲಿ ಚಾಲಕ ದಳದ ನಿಯಂತ್ರಣ ಅಧಿಕಾರಿ ಸ್ವರ್ಣಾಕರ್‌ ಮತ್ತು ನಿವೃತ್ತ ರೈಲ್ವೆ ಚಾಲಕರಾದ ಜಯಸಿಂಹ, ರೈಲ್ವೆ ರಕ್ಷಣಾ ದಳದ ಸಬ್ ಇನ್ಸ್ಪೆಕ್ಟರ್‌ ಗವಾಸ್ಕರ್‌ ಸಭೆಯನ್ನು ಕುರಿತು ಮಾತನಾಡಿದರು. ರೈಲ್ವೆ ನಿವೃತ್ತ ಚಾಲಕ ಕರವೇ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ರಾಜಣ್ಣ ಕರವೇ ಕಾರ್ಯದರ್ಶಿ ರವಿಶಂಕರ್, ಶಶಿವಾಳ ಮುಖಂಡರಾದ ಮೋಹಿದ್ದಿನ್ ಪಾಷ ವೇದಿಕೆ ಮೇಲೆ ಉಪಸ್ಥಿತರಿದ್ದರು.

ರಕ್ತದಾನ ಮಾಡಿದ ದಾನಿಗಳನ್ನು ರೈಲ್ವೆ ನೌಕರರ ಕನ್ನಡ ಬಳಗದ ಅಧ್ಯಕ್ಷ ಹಾಗೂ ರೈಲು ಚಾಲಕ ಮಂಜು ಸಿ.ರವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪ್ರವೀಣ್ ಬಿಕೆ ಅವರು ಇಂಪಾದ ಕನ್ನಡ ಹಾಡನ್ನು ಹಾಡಿ ರಂಜಿಸಿದರು. ರೈಲ್ವೆ ಕನ್ನಡ ನೌಕರರ ಬಳಗದ ಪ್ರಕಾಶ್, ಯೋಗೀಶ್, ವಿನಯ್, ಚೇತನ್ ಕುಮಾರ್‌, ಸತೀಶ್ , ಗಂಗಾಧರ್‌, ಯಶೋಧ ಮೂರ್ತಿ, ಧನಂಜಯ್, ಭರತ್, ಸಿದ್ದೇಶ್, ಹರೀಶ್, ಪ್ರಸನ್ನ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.