ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೊದ್ದೂರು ಗ್ರಾಮದ 49/3 ಪ್ರದೇಶ ನಿವೇಶನಕ್ಕೆ ಯೋಗ್ಯವಾಗಿ ಕಂಡುಬರುತ್ತಿಲ್ಲ. 2018ರ ನಂತರ ಭೂ ವಿಜ್ಞಾನ ಇಲಾಖೆಯವರು ಸ್ಥಳ ಪರೀಶೀಲನೆ ಮಾಡಿ ನಿವೇಶನಕ್ಕೆ ಯೋಗ್ಯವೇ ಎಂದು ದೃಢೀಕರಣ ನೀಡಬೇಕಿದೆ ಎಂಬ ನಿಯಮವಿದೆ. ಆ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಡಿಕೇರಿ ತಹಸೀಲ್ದಾರ್ ಪ್ರವೀಣ್ ಹೇಳಿದ್ದಾರೆಹೊದ್ದೂರು ಗ್ರಾಮದ ಪೆಗ್ಗೋಳಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಹೋರಾಟ ನಡೆಸುತ್ತಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಿವೇಶನಕ್ಕಾಗಿ ಹೋರಾಟ ಮಾಡುತ್ತಿರುವ ಜಾಗ ಖಾಸಗಿ ಅವರದಾಗಿದ್ದು, ತೆರವುಗೊಳಿಸಬೇಕಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದ ತಹಸೀಲ್ದಾರ್ ಪ್ರವೀಣ್, ಇಲ್ಲೇ ಸಮೀಪದಲ್ಲಿರುವ ಜಾಗ ನಿವೇಶನಕ್ಕೆ ಮಂಜೂರು ಮಾಡಬೇಕಿದ್ದರೆ, ಅದು ವಾಸಕ್ಕೆ ಯೋಗ್ಯವೇ ಎಂದು ಪರಿಶೀಲಿಸಬೇಕು. ಕುಡಿಯುವ ನೀರಿನ ಲಭ್ಯತೆ, ರಸ್ತೆ ಸೌಲಭ್ಯ ಮತ್ತಿತರ ಮೂಲಭೂತ ಸೌಲಭ್ಯಗಳ ಬಗ್ಗೆ ಪರೀಶಿಲನೆ ನಡೆಸಬೇಕಿದೆ. ಆ ಬಳಿಕವಷ್ಟೇ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದರು.ಹೊದ್ದೂರು ಮಾತ್ರವಲ್ಲಸ ಎಂ ಬಾಡಗದಲ್ಲೂ ನಿವೇಶನರಹಿತರ ಸಮಸ್ಯೆಗಳಿವೆ. ಅಲ್ಲಿಯೂ ಸಂಬಂಧಿಸಿದವರ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಯಾವುದೇ ಸಂದರ್ಭದಲ್ಲಿ ಖಾಸಗಿ ಸ್ಥಳ ಒತ್ತುವರಿ ಮಾಡಿ ನಿವೇಶನಕ್ಕೆ ವಶಪಡಿಸಿಕೊಳ್ಳುವಂತಿಲ್ಲ. ಅದಕ್ಕೆ ಕಾನೂನಾತ್ಮಕ ಕ್ರಮಗಳಿವೆ ಎಂದರು.
ಕಳೆದ 15 ದಿನಗಳಿಂದ ಹೋರಾಟ ನಡೆಸುತ್ತಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.ನಿವೇಶನಾ ರಹಿತರ ಸಮಸ್ಯೆ ಬಗೆಹರಿಸಿ ಶೀಘ್ರ ನಿವೇಶನ ನೀಡಲು ಕ್ರಮ ಕೈಗೊಳ್ಳುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮೊಣ್ಣಪ್ಪ ತಹಸೀಲ್ದಾರ್ ಪ್ರವೀಣ್ ಅವರನ್ನು ಒತ್ತಾಯಿಸಿದ್ದರು.
ಕಂದಾಯ ಪರಿವೀಕ್ಷಕ ಪ್ರಸಾದ್ ಹಾಗೂ ಗ್ರಾಮ ಲೆಕ್ಕಿಗ ಸಂತೋಷ್ ಪಾಟೀಲ ಗ್ರಾಮ ಅಭಿವೃದ್ಧಿ ಅಧಿಕಾರಿ ಅಬ್ದುಲ್ ಸಿಬ್ಬಂದಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕುಸುಮಾವತಿ, ಬೋಜ, ಸತೀಶ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಕಿರಣ್, ಜಗದೀಶ, ಮಹಮ್ಮದ್, ಮಾದೇಶ, ಲೋಕೇಶ್, ಸುಜಾತಾ,ಮೋಹನ್, ಆನಂದ, ಸೌಮ್ಯ ಸೇರಿದಂತೆ ಹೊದ್ದೂರು ಗ್ರಾಮ ಪಂಚಾಯಿತಿಗೆ ಒಳಪಟ್ಟ ಹಲವು ನಿವೇಶನಾ ರಹಿತರು ಹಾಗೂ ಭೂ ಮಾಲೀಕರು, ಗ್ರಾಮಸ್ಥರು ಉಪಸ್ಥಿತರಿದ್ದರು .
ಹೊದ್ದೂರು ಗ್ರಾಮದ ಸರ್ಕಾರಿ ಜಾಗ ದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಹೊದ್ದೂರು ಗ್ರಾಮದಲ್ಲಿ 800ಕ್ಕೂ ಅಧಿಕ ನಿರಾಶ್ರಿತ ಬಡ ಕುಟುಂಬಗಳಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸರ್ಕಾರಿ ಕಂದಾಯ ಭೂಮಿಯನ್ನು ಭೂ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಇದುವರೆಗೂ ಬಡವರಿಗೆ ನಿವೇಶನ ಸರ್ಕಾರ ನೀಡಲು ಮುಂದಾಗಿರುವುದಿಲ್ಲ. ಹೊದ್ದೂರು ಗ್ರಾಮದ ಸರ್ವೆ ನಂ. 53/10 49/3 ಮತ್ತು 88/4 ರಲ್ಲಿ ನಿವೇಶನ ಕಲ್ಪಿಸಿ ಕೊಡಬೇಕು ಎಂದು ಹೋರಾಟ ಮುಂದುವರಿಸಿದ್ದರು.