ಗೂಡ್ಸ್ ಆಟೋ ಚಾಲಕರುಗಳ ದುಡಿಮೆ ಕೇವಲ ನಿಮ್ಮ ಕುಟುಂಬದ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಸಮಾಜದ ಆರ್ಥಿಕ ಚಟುವಟಿಕೆಗಳಿಗೂ ನಿಮ್ಮ ಶ್ರಮ ದೊಡ್ಡ ಕೊಡುಗೆ ನೀಡುತ್ತಿದೆ. ಬಿಸಿಲು-ಮಳೆ ಎನ್ನದೆ ದುಡಿಯುವ ನಿಮ್ಮ ಸೇವೆಯನ್ನು ಸಮಾಜ ಗುರುತಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗೂಡ್ಸ್ ವಾಹನ ಚಾಲಕರು ತಮ್ಮ ನಿತ್ಯದ ಕಾಯಕದ ಜೊತೆಗೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದಕ್ಕೆ ಎಂದು ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣ ಪುರಸಭೆ ಮುಂಭಾಗದ ಬಂಡಿಸಿದ್ದೇಗೌಡ ವೃತ್ತದಲ್ಲಿ ಶ್ರೀಪಂಚಮುಖಿ ವಿನಾಯಕ ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ 7ನೇ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ತಮ್ಮ ನಿತ್ಯದ ಕಾಯಕದ ಜೊತೆಗೆ ಒಗ್ಗಟ್ಟಿನಿಂದ ರಾಜ್ಯೋತ್ಸವ ಆಚರಣೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸುವ ಮೂಲಕ ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ಮೇಲಿನ ನಿಮ್ಮ ಸಾಮಾಜಿಕ ಕಾಳಜಿ ಎದ್ದು ಕಾಣುತ್ತಿದೆ ಎಂದು ಶ್ಲಾಘಿಸಿದರು.

ಗೂಡ್ಸ್ ಆಟೋ ಚಾಲಕರುಗಳ ದುಡಿಮೆ ಕೇವಲ ನಿಮ್ಮ ಕುಟುಂಬದ ನಿರ್ವಹಣೆಗೆ ಮಾತ್ರ ಸೀಮಿತವಾಗದೆ ಸಮಾಜದ ಆರ್ಥಿಕ ಚಟುವಟಿಕೆಗಳಿಗೂ ನಿಮ್ಮ ಶ್ರಮ ದೊಡ್ಡ ಕೊಡುಗೆ ನೀಡುತ್ತಿದೆ. ಬಿಸಿಲು-ಮಳೆ ಎನ್ನದೆ ದುಡಿಯುವ ನಿಮ್ಮ ಸೇವೆಯನ್ನು ಸಮಾಜ ಗುರುತಿಸಬೇಕು ಎಂದರು.

ಗೂಡ್ಸ್ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು, ವಾಹನಗಳ ದಾಖಲೆ, ಪಾರ್ಕಿಂಗ್, ಸಂಚಾರ ನಿಯಮಗಳು ಹಾಗೂ ಜೀವನೋಪಾಯದ ಸವಾಲುಗಳ ಬಗ್ಗೆ ಜನಪ್ರತಿನಿಧಿಗಳಾದ ನಾವು ಗಮನಹರಿಸಿ, ಸಾಧ್ಯವಾದಷ್ಟು ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದರು.

ಈ ವೇಳೆ ಪಂಚಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಲ್.ದಿನೇಶ್, ಪುರಸಭಾ ಮಾಜಿ ಸದಸ್ಯ ಎಸ್.ಪ್ರಕಾಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಜನಿಕಾಂತ್, ಮುಖಂಡ ಸುರೇಶ್, ಅಭಿಷೇಕ್, ರುಕ್ಮಾಂಗದ, ಗೂಡ್ಸ್ ಆಟೋ ಸಂಘದ ಅಧ್ಯಕ್ಷ ಎನ್.ಕಿರಣ್ ಕುಮಾರ್, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಆದರ್ಶ ಖಜಾಂಚಿ ಮನು, ಪದಾಧಿಕಾರಿಗಳಾದ ಬಾಬಣ್ಣ, ಸ್ವಾಮಿ, ಪರಮೇಶ್, ಹರೀಶ, ಆಟೋ ಮುಜೀಬ್ ಇತರರು ಉಪಸ್ಥಿತರಿದ್ದರು.