ಭವಿಷ್ಯದಲ್ಲಿ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ ಹಾಗೂ ಅದನ್ನೂ ಮೀರಿ ಬರುವ ಹೊಸ ತಂತ್ರಜ್ಞಾನಗಳು ಸಾಹಿತ್ಯ ಕ್ಷೇತ್ರದ ಅಧ್ಯಯನ ಹಾಗೂ ಸಂಶೋಧನೆಗೆ ಅನುಕೂಲವಾಗಲಿವೆ.

ಧಾರವಾಡ:

ಭವಿಷ್ಯದಲ್ಲಿ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ ಹಾಗೂ ಅದನ್ನೂ ಮೀರಿ ಬರುವ ಹೊಸ ತಂತ್ರಜ್ಞಾನಗಳು ಸಾಹಿತ್ಯ ಕ್ಷೇತ್ರದ ಅಧ್ಯಯನ ಹಾಗೂ ಸಂಶೋಧನೆಗೆ ಅನುಕೂಲವಾಗಲಿವೆ. ಇಂತಹ ತಂತ್ರಜ್ಞಾನವನ್ನು ಸಾಹಿತ್ಯದ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ವಿಶ್ವವಿದ್ಯಾಲಯ ಗಮನಿಸಬೇಕಿದೆ ಎಂದು ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್‌ ಹೇಳಿದರು.

ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ನಡೆದ ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು, ದೊಡ್ಡತನವೆಂದರೆ ಕೇವಲ ಸ್ಥಾನಮಾನ ಅಥವಾ ಸಂಪತ್ತಲ್ಲ, ಅದು ಮನಸ್ಸಿನ ಶ್ರೀಮಂತಿಕೆ. ಅರಿವೇ ಗುರು ಎಂದರೆ ನಮ್ಮ ಜೀವನದಲ್ಲಿ ಯಾವುದೇ ವ್ಯಕ್ತಿ, ಘಟನೆ ಅಥವಾ ಅನುಭವ ಯಾವುದೋ ಒಂದು ರೂಪದಲ್ಲಿ ನಮಗೆ ಅರಿವು ಮೂಡಿಸಿ ವಿದ್ಯೆ ಕಲಿಸುವುದಾಗಿದೆ. ವಿದ್ಯಾವಂತರಾಗಿರುವುದು ಮುಖ್ಯ. ಆದರೆ, ನಮ್ಮ ಪಕ್ಕದಲ್ಲಿರುವ ವ್ಯಕ್ತಿಯ ನೋವನ್ನು ಅರ್ಥಮಾಡಿಕೊಳ್ಳದಿದ್ದರೆ ಆ ವಿದ್ಯೆಗೆ ಏನು ಅರ್ಥ ಎಂದರು.

ನಾನು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿಲ್ಲ. ನನ್ನ ವಿದ್ಯಾಭ್ಯಾಸದ ಹಿನ್ನೆಲೆ ಬೇರೆ ಇದ್ದರೂ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ನನ್ನನ್ನೇ ನನ್ನ ಗುರು ಎಂದು ಭಾವಿಸಿ ಸಾಹಿತ್ಯದ ಹಾದಿಯಲ್ಲಿ ಮುನ್ನಡೆದಿದ್ದೇನೆ. ಸಾಹಿತ್ಯಕ್ಕೆ ಪದವಿ ಮಾತ್ರ ಮಾನದಂಡವಲ್ಲ. ಸೂಕ್ಷ್ಮ ಸಂವೇದನೆ, ವಿಶಾಲ ಮನಸ್ಸು ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿವೆ ಎಂದು ತಿಳಿಸಿದರು.

ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಸಾಹಿತ್ಯ, ಶಿಕ್ಷಣ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ವಿಶ್ವವಿದ್ಯಾಲಯವು ಅವರ ಸಾಧನೆಗೆ ಮನ್ನಣೆ ನೀಡುತ್ತಿದೆ ಎಂದರು.

ಆರು ಸಾಧಕರಿಗೆ ಅರಿವೇ ಗುರು:

ಕವಿವಿಯಿಂದ 2025-26, 2026-27 ಸಾಲಿನ ಅರಿವೇ ಗುರು ಪ್ರಶಸ್ತಿಯನ್ನು ಆರು ಜನ ಸಾಧಕರಿಗೆ ನೀಡಿ ಗೌರವಿಸಲಾಯಿತು. 2025ನೇ ಸಾಲಿನ ಪ್ರಶಸ್ತಿಯನ್ನು ಡಾ. ಮಲ್ಲಿಕಾ ಘಂಟಿ, ಪ್ರೊ. ಎನ್. ಉಮಾಕಾಂತ ಹಾಗೂ ಡಾ. ವಿಜಯಲಕ್ಷ್ಮಿ ಎ. ಅಮ್ಮಿನಭಾವಿ ಹಾಗೂ 2026ನೇ ಸಾಲಿನ ಪ್ರಶಸ್ತಿಯನ್ನು ಬಾನು ಮುಷ್ತಾಕ್, ಪ್ರೊ. ಗಿರಿಧರ ಯು. ಕುಲಕರ್ಣಿ ಹಾಗೂ ಪ್ರೊ. ರಾಮ ಎಸ್. ದೇಶಪಾಂಡೆ ಅವರಿಗೆ ಪ್ರದಾನ ಮಾಡಲಾಯಿತು. ಪ್ರೊ. ಎನ್. ಉಮಾಕಾಂತ ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.ಬೇಕಿದ್ದರೆ ಪುರುಷರ ಹೊರಲಿ ಕುಂಭ:

ಹೆಣ್ಣು ಮಕ್ಕಳು ವಿಶ್ವವಿದ್ಯಾಲಯಗಳಿಗೆ ಬರುವುದು ಶಿಕ್ಷಣ ಪಡೆಯಲು ಮತ್ತು ತಮ್ಮ ಭವಿಷ್ಯ ರೂಪಿಸಿಕೊಳ್ಳಲು. ಹೀಗಿರುವಾಗ ವಿಶ್ವವಿದ್ಯಾಲಯಗಳಲ್ಲಿ ಹೆಣ್ಣು ಮಕ್ಕಳಿಗೆ ಕುಂಭ ಹೊರೆಸಿ ಮೆರವಣಿಗೆ ಮಾಡುವ ಪದ್ಧತಿಯನ್ನು ಮುಂದಿನ ದಿನಗಳಲ್ಲಿ ನಿಲ್ಲಿಸಬೇಕು. ಬೇಕಿದ್ದರೆ ಗಂಡು ಮಕ್ಕಳೂ ಕುಂಭ ಹೊರಲಿ ಎಂದು ಹಿರಿಯ ಸಾಹಿತಿ ಡಾ. ಮಲ್ಲಿಕಾ ಎಸ್. ಘಂಟಿ ಕುಲಪತಿಗಳಿಗೆ ಸಲಹೆ ನೀಡಿದರು. ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಗೌರವ, ಘನತೆ ಮತ್ತು ಸಮಾನತೆಗೆ ಆದ್ಯತೆ ನೀಡಬೇಕು. ಅವರಿಗೆ ಅನಗತ್ಯ ಸಾಂಪ್ರದಾಯಿಕ ಹೊಣೆಗಾರಿಕೆಗಳನ್ನು ಹೊರೆಯಿಸಬೇಡಿ ಎಂದು ಡಾ. ಘಂಟಿ ಸಮಾನತೆಯ ಪಾಠ ಮಾಡಿದರು.