ಬಸವಣ್ಣನವರು ವಚನ ಸಾಹಿತ್ಯದಲ್ಲಿ ರಾಜಬೀದಿ, ರಾಜತೇಜ, ಭಕ್ತಿಪಕ್ಷದ ಜತೆಗ ಅನುಭವ ಮಂಟಪದ ಮೂಲಕ ನೈಜ ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಆಶಯಗಳನ್ನು ಒಳಗೊಂಡಿದೆ.

ಧಾರವಾಡ:

ಬಸವಣ್ಣನವರು ವಚನ ಸಾಹಿತ್ಯದಲ್ಲಿ ರಾಜಬೀದಿ, ರಾಜತೇಜ, ಭಕ್ತಿಪಕ್ಷದ ಜತೆಗ ಅನುಭವ ಮಂಟಪದ ಮೂಲಕ ನೈಜ ಪ್ರಜಾಪ್ರಭುತ್ವ ಹಾಗೂ ಸಮಾನತೆಯ ಆಶಯಗಳನ್ನು ಒಳಗೊಂಡಿದೆ ಎಂದು ಸಾಹಿತಿ ಡಾ. ಬಸವರಾಜ ಸಾದರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ 19ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣದಲ್ಲಿ ವಚನ ಪ್ರಜಾತಂತ್ರ, ಸಾಹಿತ್ಯ ಸಮ್ಮೇಳನದ ಸತ್ವ, ರಾಜಕೀಯ ಪ್ರಭಾವ ಹಾಗೂ ಸಾಹಿತ್ಯ ಪರಿಷತ್ತಿನ ಬೆಳವಣಿಗೆ ಕುರಿತು ಅವರು ಮಾತನಾಡಿದರು.

ಭಾರತಕ್ಕೆ ವಚನ ಪ್ರಜಾತಂತ್ರ ಮಾದರಿಯಾಗಬೇಕು. ಸಮ್ಮೇಳನದ ರಾಜಕಾರಣಿಗಳು ಮತ್ತು ಮಠಾಧಿಪತಿಗಳ ಪ್ರಸ್ತಾಪ ಬಂದಾಗ, ರಾಜಕಾರಣಿಗಳ ಆಗಮನ ಸಭೆಯ ಶಿಸ್ತು ಬದಲಾಗುತ್ತದೆ ಎಂದ ಅವರು, ನಮ್ಮವರು ಮರಾಠಿ ರಾಜಕಾರಣಿಗಳು ಅನುಸರಿಸಬೇಕು ಎಂಬ ಸಲಹೆ ನೀಡಿದರು.

ಶರಣೋದ್ಯಮಿಗಳು, ಬಸವೋದ್ಯಮಿಗಳ ಹಾಗೂ ವ್ಯಾಪಾರೋದ್ಯಮಿಗಳು ಶರಣರ ವಚನ ಸಾಹಿತ್ಯಕ್ಕೆ ದೊಡ್ಡ ಅನ್ಯಾಯ ಬಗೆದಿದ್ದಾರೆ. ಅವರೆಲ್ಲರೂ ಈ ವಚನ ಸಾಹಿತ್ಯವನ್ನು ಬದುಕಿಗೆ ಅನ್ವಯಿಸಿಕೊಂಡು, ನೈಜವಾಗಿ ಮನಷ್ಯರಾಗಿ ಬಾಳಬೇಕು ಎಂದು ಸಾದರ ಕಿವಿಮಾತು ಹೇಳಿದರು.

ಸಮಾಜದಲ್ಲಿ ಸಮಸ್ಯೆಗಳು ಹೆಚ್ಚಾದಾಗ ಪರಿಸ್ಥಿತಿ ಹೇಗೆ ವಿಕೋಪಕ್ಕೆ ಹೋಗುವ ಬಗ್ಗೆ ಅಲ್ಲಮಪ್ರಭು ಅವರ ವಚನದ ಸಾಲುಗಳು ಉಲ್ಲೇಖಿಸಿ, ತಲೆಯಲ್ಲಿ ತುಂಬಬೇಕಾದದ್ದು ಒಲೆಯಲ್ಲಿ ತುಂಬಿ, ಹೊಗೆ ಘನವಾದ ಸ್ಥಿತಿಯನ್ನು ವಚನದ ಮೂಲಕ ಚಿತ್ರಿಸಿದ್ದಾರೆ ಎಂದರು.

ಧಾರವಾಡದ ಹಿಂದಿನ ಸಾಹಿತ್ಯ ಸಂಭ್ರಮದ ಶಿಸ್ತು ಮತ್ತು ಸಾಹಿತ್ಯಿಕ ವಾತಾವರಣವನ್ನು ಸ್ಮರಿಸಿದ ಅವರು, ತಮ್ಮ ಗುರುಗಳು, ದ.ರಾ. ಬೇಂದ್ರೆ ಅವರೊಂದಿಗಿನ ಭೇಟಿ, ಕವಿರಾಜ ಮಾರ್ಗ ಮತ್ತು ಹಳೆಗನ್ನಡದ ಕಾವ್ಯಗಳ ಹಿರಿಮೆಯನ್ನೂ ಡಾ. ಬಸವರಾಜ ಸಾದರ ಭಾಷಣದಲ್ಲಿ ಪ್ರಸ್ತಾಪಿಸಿದರು.

ಸಮ್ಮೇಳನದ ಸಾರ್ವಧ್ಯಕ್ಷ ಡಾ. ವೀರಣ್ಣ ರಾಜೂರ ಮಾತನಾಡಿ, ಯಾವುದೇ ರಾಜಕೀಯ ವೇದಿಕೆ ಅಥವಾ ಮಠಾಧೀಶರ ಹಂಗಿಲ್ಲದೆ, ಕೇವಲ ಸಾಹಿತ್ಯಾಸಕ್ತರು ಮತ್ತು ಪರಿಣತರು ಸೇರಿ ನಡೆಸಿದ ಈ ಸಮ್ಮೇಳನವು ರಾಜ್ಯಕ್ಕೆ ಮಾದರಿ ಎಂದರು.

ಚಿಂತಕರಾದ ಡಾ. ರಂಜಾನ್ ದರ್ಗಾ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಕುಲಪತಿ ಡಾ. ಎ.ಎಂ. ಖಾನ್ ಹಾಗೂ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ. ವೀರಣ್ಣ ರಾಜೂರ ದಂಪತಿ ಸನ್ಮಾನಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಾವೇರಿ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಡಾ. ಜಿನದತ್ತ ಹಡಗಲಿ, ಎಸ್.ಎಂ. ದಾನಪ್ಪಗೌಡರ, ಪ್ರಾಚಾರ್ಯರಾದ ರೇಖಾ ಜೋಗಳ, ಪ್ರಮೀಳಾ ಜಕ್ಕಣ್ಣವರ, ವಿದ್ಯಾ ವಂಟಮನುರಿ, ಡಾ. ಎಸ್‌.ಎಸ್‌. ದೊಡ್ಡಮನಿ ಇದ್ದರು.