ಬನವಾಸಿಯಲ್ಲಿ ಕದಂಬ ಕನ್ನಡ ಸೇನೆಯಿಂದ ಇಂದು ಕನ್ನಡ ರಾಜ್ಯೋತ್ಸವ: ನಾ.ಅಂಬರೀಷ

| Published : Nov 10 2025, 01:45 AM IST

ಬನವಾಸಿಯಲ್ಲಿ ಕದಂಬ ಕನ್ನಡ ಸೇನೆಯಿಂದ ಇಂದು ಕನ್ನಡ ರಾಜ್ಯೋತ್ಸವ: ನಾ.ಅಂಬರೀಷ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ಮೊದಲ ರಾಜಧಾನಿ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಆವರಣದಲ್ಲಿ ಕದಂಬ ಕನ್ನಡ ಸೇನೆಯಿಂದ ನ.10ರಂದು ಮಧ್ಯಾಹ್ನ 3 ಗಂಟೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ಕನ್ನಡದ ಮೊದಲ ರಾಜಧಾನಿ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಆವರಣದಲ್ಲಿ ಕದಂಬ ಕನ್ನಡ ಸೇನೆಯಿಂದ ನ.10ರಂದು ಮಧ್ಯಾಹ್ನ 3 ಗಂಟೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ನಾ.ಅಂಬರೀಷ ಹೇಳಿದರು.

ಶನಿವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕದಂಬರ ನಾಡಿನಲ್ಲಿ ಕನ್ನಡದ ವೈಭವದಲ್ಲಿ ರಾಜ್ಯದ ಕೊನೆಯ ರಾಜಮನೆತನದ ಮೈಸೂರಿನ ಮಹಾರಾಜ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕದಂಬ ರಾಜರತ್ನ ಶ್ರೀ ಮಯೂರವರ್ಮ ಪ್ರಶಸ್ತಿ ಬಿರುದು ನೀಡಿ ಸನ್ಮಾನಿಸಲಾಗುತ್ತದೆ. ಜ್ಯಾತ್ಯತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪನವರು, ಗೌಡಗೆರೆ ಚಾಮುಂಡೇಶ್ವರಿ ದೇವಾಲಯದ ಧರ್ಮದರ್ಶಿ ಮಲ್ಲೇಶ್ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕದಂಬ ಕನ್ನಡ ಸೇನೆಯ ಸಂಸ್ಥಾಪಕ ಗೌರವಾಧ್ಯಕ್ಷ ಯೋಗವಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕದಂಬ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕದಂಬ ಶಿವಕುಮಾರ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಶಾಂತಾರಾಮ ಸಿದ್ದಿ, ಸಾಹಿತಿ ಡಾ. ಶಿವಕುಮಾರ, ಸಂತೋಷಕುಮಾರ ಮೆಹಂದಳೆ, ಗುಂಡ್ಲುಪೇಟೆ ಶಾಸಕ ಎಚ್‌.ಎಂ. ಗಣೇಶಪ್ರಸಾದ, ಮೈಸೂರು ಶಾಸಕ ಶ್ರೀವತ್ಸ, ಮಾಜಿ ಸಚಿವ ಎನ್‌.ಮಹೇಶ, ಅಖಿಲ ಭಾರತ ಸನಾತನ ಧರ್ಮ ಜಾಗರಣ ಮಂಚ್‌ನ ರಾಜು, ಚಿತ್ರನಟ ರಾಮಕೃಷ್ಣ ಹೆಗಡೆ ನೀರ್ನಳ್ಳಿ, ಪ್ರಮುಖರಾದ ಡಾ. ರವಿ ಶೆಟ್ಟಿ ಬೈಂದೂರು, ಸಿ.ಎಸ್. ವಿಜಯಕುಮಾರ, ಡಾ. ಲೋಕಾನಂದ, ಪ್ರವೀಣ ಭಾರಧ್ವಾಜ, ಬನವಾಸಿ ಗ್ರಾಪಂ ಅಧ್ಯಕ್ಷೆ ಬೇಬಿ ಆಯಿಷಾ, ಬನವಾಸಿ ಮಧುಕೇಶ್ವರ ದೇವಸ್ಥಾನದ ಅಧ್ಯಕ್ಷ ರಾಜಶೇಖರ ಒಡೆಯರ್‌ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದರು.

ವಿವಿಧ ಕ್ಷೇತ್ರದ ಸಾಧಕರಿಗೆ ಕದಂಬ ಕನ್ನಡ ಕ್ರೀಡಾ ರತ್ನ, ಕ್ರಾಂತಿ ರತ್ನ, ಗುರು ರತ್ನ, ವೈದ್ಯ ರತ್ನ, ರೈತ ರತ್ನ, ಸೇವಾ ರತ್ನ, ಶಾಂತಿ ರತ್ನ, ವಿಶಿಷ್ಟ ಕಲಾರತ್ನ, ಸಂಶೋಧನಾ ರತ್ನ, ಕಾನೂನು ರತ್ನ, ಉದ್ಯಮ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ತಹಸೀಲ್ದಾರ್ ಪುಟ್ಟರಾಜ ಗೌಡ ಸ್ವತಃ ಹಾಡುವ ಮೂಲಕ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕದಂಬ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಶಿವಕುಮಾರ, ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಸದಸ್ಯ ಉಮಾಪತಿ ಭಟ್ಟ, ಜಿಲ್ಲಾ ಉಪಾಧ್ಯಕ್ಷ ರವಿ ಪೂಜಾರಿ ಮತ್ತಿತರರಿದ್ದರು.