ಪಂಚ ಗ್ಯಾರಂಟಿಗಳ ಮೂಲಕ ಜನಜೀವನಕ್ಕೆ ನೆರವು: ಡಿಸಿ ಡಾ. ಸುಶೀಲಾ
KannadaprabhaNewsNetwork | Published : Nov 02 2023, 01:01 AM IST
ಪಂಚ ಗ್ಯಾರಂಟಿಗಳ ಮೂಲಕ ಜನಜೀವನಕ್ಕೆ ನೆರವು: ಡಿಸಿ ಡಾ. ಸುಶೀಲಾ
ಸಾರಾಂಶ
ನಾಡು ನುಡಿ ರಕ್ಷಣೆ, ಬಡವರ ಅಭ್ಯುದಯಕ್ಕೆ ಸರ್ಕಾರದ ನೆರವು । ಜಿಲ್ಲಾಡಳಿತದಿಂದ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಯಾದಗಿರಿ: ರಾಜ್ಯದ ನೂತನ ಸರ್ಕಾರ ನಾಡಿನ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತಿದೆ. ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡಿದೆ. ಪಂಚ ಗ್ಯಾರಂಟಿಗಳ ಮೂಲಕ ಜನರ ಜೀವನಕ್ಕೆ ಸರ್ವರೀತಿಯಲ್ಲಿಯೂ ನೆರವಾಗುತ್ತಿದ್ದು, ಸರ್ಕಾರ ಈ ದಿಸೆಯಲ್ಲಿ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ, ಕನ್ನಡ ನಾಡು ವರ್ಣಮಯ ಇತಿಹಾಸ ಹೊಂದಿದೆ. ಕನ್ನಡ ರಾಜ್ಯ ಬಹುಭಾಷೆ, ಬಹುಸಂಸ್ಕೃತಿ ಹಾಗೂ ಬಹು ಧರ್ಮಗಳ ನೆಲೆವೀಡು, ನಾಡಿನ ನೆಲ. ಜಲ, ಸಂಸ್ಕೃತಿ ಉತ್ತುಂಗಕ್ಕೇರಿಸಲು ಮುಖ್ಯಮಂತ್ರಿ ಸಿದ್ರಾಮಯ್ಯ ನೇತೃತ್ವದ ಸರ್ಕಾರ ನಾಡು-ನುಡಿಯ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ, ಬಡವರ ಅಭ್ಯುದಯಕ್ಕಾಗಿ ಶ್ರಮಿಸುತ್ತಿದೆ ಎಂದರು. ಕನ್ನಡ ನಾಡು-ನುಡಿ ಸೇವೆಗಾಗಿ ಶ್ರಮಿಸುತ್ತಿರುವ ಎಲ್ಲಾ ಕನ್ನಡಿಗರ ಬದ್ಧತೆ ಹಾಗೂ ಕೊಡುಗೆಯನ್ನು ಈ ಶುಭ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಭವ್ಯ ಭಾರತ ಹಾಗೂ ಕರ್ನಾಟಕ ರಾಜ್ಯದ ಶ್ರೇಷ್ಠತೆ ಎತ್ತಿ ಹಿಡಿಯಲು ನಾವೆಲ್ಲರೂ, ನಿಷ್ಠೆಯಿಂದ ಶ್ರಮಿಸೋಣ ಎಂದರು. ಕರ್ನಾಟಕದ ಸಾರ್ವಭೌಮ ಭಾಷೆಯಾದ ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಭವ್ಯ ಪರಂಪರೆ ಇದೆ. ಸುದೀರ್ಘ ಸಾಂಸ್ಕೃತಿಕ ಇತಿಹಾಸದೊಂದಿಗೆ ಜನಭಾಷೆಯಾಗಿ, ಜನಮಾನಸದ ಭಾಷೆಯಾಗಿ ಬೆಳೆದಿದೆ. ಬುದ್ಧ ಬಸವಾದಿ ಶರಣರು, ಮಹಾತ್ಮ ಗಾಂಧೀಜಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸೇರಿದಂತೆ ಹಲವು ನಾಯಕರು ತೋರಿದ ದಾರಿಯಲ್ಲಿ ಸಾಗಿ ಬಂದ ಕನ್ನಡ ನಾಡು ದೇಶದ ರಾಷ್ಟ್ರೀಯತೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದೆ ಎಂದರು. ಕರ್ನಾಟಕ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಹಾಗೂ ತ್ಯಾಗ ಮಾಡಿದ ಎಸ್.ನಿಜಲಿಂಗಪ್ಪನವರು, ಆಲೂರು ವೆಂಕಟರಾಯರು, ಮುದವಿಡು ಕೃಷ್ಣರಾಯರು, ಡಾ.ಫ.ಗು.ಹಳಕಟ್ಟಿಯವರು, ಮೊಹರೆ ಹನುಮಂತರಾಯರು, ಚನ್ನಬಸಪ್ಪ ಅಂಬಲಿಯವರು ಹೀಗೆ ಮುಂತಾದವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು. 1950ರಲ್ಲಿ ಭಾರತ ಗಣತಂತ್ರವಾದ ಅವಧಿಯಲ್ಲಿ ಭಾಷಾವಾರು ಪ್ರಾಂತಗಳ ನಿರ್ಮಾಣದ ಬಗ್ಗೆ ದೇಶದಲ್ಲಿ ವಿವಿಧ ಪ್ರಾಂತಗಳಲ್ಲಿ ಹೋರಾಟಕ್ಕಾಗಿ ಸಮಿತಿಗಳನ್ನು ರಚಿಸಿಕೊಂಡಿದ್ದರು. ಅದರಂತೆ ನಮ್ಮ ಕರ್ನಾಟಕದಲ್ಲಿ ಕನ್ನಡ ಭಾಷೆ ಮಾತನಾಡುವವರು ತಮ್ಮ ಅಖಂಡ ಕರ್ನಾಟಕದ ನಿರ್ಮಾಣಕ್ಕೆ ವೇಗವಾದ ಆಂದೋಲನಕ್ಕೆ ಸಾಕ್ಷಿಯಾದರು. ಆಲೂರು ವೆಂಕಟರಾಯರು, ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಂಬಳಿ, ಆರ್.ಎಚ್. ದೇಶಪಾಂಡೆ, ರಂಗರಾವ್ ದಿವಾಕರ್, ಕೌಜಲಗಿ ಶ್ರೀನಿವಾಸರಾಯರು, ದೊಡ್ಡಮೇಟಿಯವರು, ಕೆಂಗಲ್ ಹನುಮಂತಯ್ಯ, ಗೊರೂರ್ ರಾಮಸ್ವಾಮಿ ಅಯ್ಯಂಗಾರ್, ಎನ್.ಎಸ್. ಹರ್ಡೇಕರ್, ಕಡಪ ರಾಘವೇಂದ್ರ ರಾಯರು, ಎಸ್. ನಿಜಲಿಂಗಪ್ಪ ಅವರು ಸೇರಿಂದಂತೆ ಕರ್ನಾಟಕ ನಿರ್ಮಾಣಕ್ಕಾಗಿ ನಡೆದ ಚಳವಳಿಯಲ್ಲಿ ಹೋರಾಟ ಮಾಡಿದವರಲ್ಲಿ ಪ್ರಮುಖರಾಗಿದ್ದ ಎಲ್ಲರನ್ನು ಕೃತಜ್ಞತಾಭಾವದಿಂದ ಇಂದಿಲ್ಲಿ ಸ್ಮರಿಸೋಣ ಎಂದರು. ಸ್ತಬ್ಧಚಿತ್ರ ಪ್ರದರ್ಶನ: ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಕೆಕೆಎಸ್‌ಆರ್‌ಟಿಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯಾದಗಿರಿ ನಗರಸಭೆ, ಯಾದಗಿರಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಪಂ, ಎನ್‌ಆರ್‌ಎಲ್‌ಎಂ ಯಾದಗಿರಿ ಪದ್ಮಲತಾ ಹಿರಿಯ ಪ್ರಾಥಮಿಕ ಶಾಲೆ, ಯಾದಗಿರಿ ಆರ್‌ವಿ ಶಾಲೆ, ಯಾದಗಿರಿ ಡಿಟಿಹೆಚ್‌ಆಂಗ್ಲ ಮಾಧ್ಯಮ ಶಾಲೆ, ಯಾದಗಿರಿ ಕನ್ಯಾ ಪ್ರೌಢ ಶಾಲೆ, ಯಾದಗಿರಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಯಾದಗಿರಿ ಪದವಿ ಪೂರ್ವ ಕಾಲೇಜು, ಕನ್ನಡ ರಾಜ್ಯೋತ್ಸವ ಅಂಗವಾಗಿ ಸ್ತಬ್ಧಚಿತ್ರ ಪ್ರದರ್ಶನ ಮಾಡಲಾಯಿತು. ಕನ್ನಡಾಂಬೆಗೆ ನುಡಿ ನಮನ ನಾಡಿನ ಹೆಸರಾಂತ ಕವಿಗಳ ಗೀತೆಗಳ ಗಾಯನ ಕಾರ್ಯಕ್ರಮ ರಚನೆ ಹುಯಿಲಗೋಳ ನಾರಾಯಣರಾಯರು, ರಚನೆ ಕುವೆಂಪು, ರಚನೆ ದರಾ ಬೇಂದ್ರೆ, ರಚನೆ ಸಿದ್ದಯ್ಯ ಪುರಾಣಿಕ, ರಚನೆ ಚೆನ್ನವೀರ ಕಣವಿ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ 68ನೇ ಕರ್ನಾಟಕ ರಾಜ್ಯೋತ್ಸವ ಕನ್ನಡಾಂಬೆಗೆ ನುಡಿ ನಮನ, ನಾಡಿನ ಹೆಸರಾಂತ ಕವಿಗಳ ಗೀತೆಗಳ ಗಾಯನ ಜರುಗಿತು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶರಣಬಸವರಾಜ, ಡಿವೈಎಸ್ಪಿ ಬಸವೇಶ್ವರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಇತರರಿದ್ದರು. ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಕೋಳಿ ನಿರೂಪಿಸಿದರು.