ಸಾರಾಂಶ
ಕುಷ್ಟಗಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥಯಾತ್ರೆಯು ಕುಷ್ಟಗಿ ಪಟ್ಟಣಕ್ಕೆ ಆಗಮಿಸಿದ್ದು, ತಾಲೂಕಾಡಳಿತ, ಕಸಾಪ ಪದಾಧಿಕಾರಿಗಳು ಸ್ವಾಗತಿಸಿ, ಅದ್ದೂರಿ ಮೆರವಣಿಗೆ ಮೂಲಕ ಯಲಬುರ್ಗಾ ತಾಲೂಕಿಗೆ ಕಳುಹಿಸಿಕೊಟ್ಟರು.
ತಾಲೂಕಿನ ತಾವರಗೇರಾದಿಂದ ಬಂದ ಕನ್ನಡ ರಥಯಾತ್ರೆಗೆ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಹತ್ತಿರ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೆರವಣಿಗೆ ಆರಂಭಿಸಲಾಯಿತು.ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ ಹಾಗೂ ಮಾರುತಿ ವೃತ್ತದಿಂದ ಕನಕದಾಸ ವೃತ್ತದ ವರೆಗೆ ಕಲಾತಂಡಗಳು, ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೀರೇಶ ಬಂಗಾರಶೆಟ್ಟರ ಮಾತನಾಡಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ರಥಯಾತ್ರೆಯು ಜಾಗೃತಿ ಮೂಡಿಸುತ್ತಿದೆ ಎಂದರು.ಕನ್ನಡ ರಥ ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸುವ ರಥವಾಗಿದೆ. ಕನ್ನಡಿಗರು ಜಾತಿ -ಮತ -ಪಂಥ -ಲಿಂಗ ಭೇದ ಮರೆತು ಕನ್ನಡಕ್ಕಾಗಿ ಶ್ರಮಿಸಬೇಕು ಮತ್ತು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಯಲು ನಾವೆಲ್ಲರೂ ಕಂಕಣಬದ್ಧರಾಗಬೇಕು ಎಂದರು.
ರವೀಂದ್ರ ಬಾಕಳೆ ಮಾತನಾಡಿ, ಕನ್ನಡ ರಥ ನಾಡಿನ ತುಂಬೆಲ್ಲ ಕನ್ನಡ ಕಂಪು ಸೂಸಲಿ ಎಂದರು. ಇಂದಿನ ದಿನಗಳಲ್ಲಿ ಅನ್ಯಭಾಷೆ ವ್ಯಾಮೋಹ ಹೆಚ್ಚಾಗುತ್ತಿದೆ. ನಮ್ಮ ನಾಡು, ಸಂಸ್ಕೃತಿ, ಪರಂಪರೆ ಹಾಗೂ ನಮ್ಮ ಭಾಷೆ ಉಳಿಸಿಕೊಂಡು ಹೋಗುವ ಕರ್ತವ್ಯ ನಮ್ಮೆಲ್ಲರ ಮೇಲಿದೆ. ಮಾತೃಭಾಷೆ ಕನ್ನಡ ಬಳಸುವ ಮೂಲಕ ಭಾಷೆ ಉಳಿಸಿ ಬೆಳೆಸಬೇಕು ಎಂದರು.ಕಸಾಪ ಮಾಜಿ ಅಧ್ಯಕ್ಷ ನಟರಾಜ ಸೋನಾರ ಮಾತನಾಡಿ, ಕನ್ನಡ ಜ್ಯೋತಿ ರಥಯಾತ್ರೆಯು ಕನ್ನಡಿಗರಲ್ಲಿ ನಾಡು -ನುಡಿಯ ಜಾಗೃತಿ ಮೂಡಿಸುತ್ತಿದೆ. ಕನ್ನಡಿಗರಲ್ಲಿ ಭಾಷೆಯ ಅಭಿಮಾನ ಮತ್ತು ನಾಡಪ್ರೇಮ ಬೆಳೆಸಲು ಸಹಕಾರಿಯಾಗಿದ್ದು, ಕನ್ನಡಿಗರ ನಡುವೆ ಭಾವನಾತ್ಮಕ ಸಂಬಂಧವನ್ನು ವೃದ್ಧಿಗೊಳಿಸುತ್ತದೆ ಎಂದರು.
ಗ್ರೇಡ್-2 ತಹಸೀಲ್ದಾರ್ ಮುರಳೀಧರ ಮುಕ್ತೇದಾರ, ಪುರಸಭೆಯ ಸದಸ್ಯ ವಸಂತ ಮೇಲಿನಮನಿ, ಜೆ.ಜೆ. ಆಚಾರ, ಹನುಮೇಶ ಗುಮಗೇರಿ, ಲೆಂಕಪ್ಪ ವಾಲಿಕಾರ, ಮಹೇಶ ಹಡಪದ, ಸುಭಾನಿ, ಚಂದ್ರಕಾಂತ ವಡ್ಡಿಗೇರಿ, ಉಮೇಶ ಯಾದವ, ಅಮಿನುದ್ದೀನ್ ಮುಲ್ಲಾ, ಮಂಜುನಾಥ ಗುಳೇದಗುಡ್ಡ, ರಾಘವೇಂದ್ರ, ಚಿರಂಜೀವಿ, ಶುಖಮುನಿ ಕೊಡರಕೇರಾ, ಪರಶಿವಮೂರ್ತಿ ಮಾಟಲದಿನ್ನಿ, ಬಸವರಾಜ ಗಾಣಿಗೇರ, ಅನಿಲಕುಮಾರ ಆಲಮೇಲ, ಅನಿಲಕುಮಾರ ಕಮ್ಮಾರ, ಸಂಗಮೇಶ ಲೂತಿಮಠ ಇದ್ದರು.