ಸಾರಾಂಶ
ನರಸಿಂಹರಾಜಪುರ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಭಾಗದಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಬೆಳೆಸುತ್ತಿದೆ ಎಂದು ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಎಸ್.ಸುಬ್ರಮಣ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಸೀತೂರು ವಿ.ಎಸ್.ಎಸ್.ಎನ್. ನ ಅನಂತ ರಾಮ ಉಪಾಧ್ಯ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಆಶ್ರಯದಲ್ಲಿ ನಡೆದ ಆಷಾಡದಲ್ಲಿ ಸಾಹಿತ್ಯ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲೂ ಸಾಹಿತ್ಯ ಆಸಕ್ತರು ಇದ್ದಾರೆ. ಇದನ್ನು ಸಾಹಿತ್ಯ ಪರಿಷತ್ ಗಮನಿಸುವ ಕೆಲಸ ಮಾಡಬೇಕಾಗಿದೆ. ಇತ್ತೀಚೆಗೆ ಜನರು ಟಿವಿ, ಮೊಬೈಲ್ ಕಡೆ ಹೆಚ್ಚಾಗಿ ಗಮನ ನೀಡುತ್ತಿದ್ದಾರೆ. ತಂತ್ರಜ್ಞಾನ, ವಿಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯಬಾರದು. ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯದ ಜೊತೆಗೆ ಕಲೆ, ಸಂಸ್ಕೃತಿ ಇನ್ನಷ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಸಹಕಾರ ಕ್ಷೇತ್ರದ ಸಾಧನೆಗೆ ನನ್ನನ್ನು ಗುರುತಿಸಿ ಸನ್ಮಾನ ಮಾಡಿರುವುದರಿಂದ ನನಗೆ ಇನ್ನಷ್ಟು ಜವಬ್ದಾರಿ ಹೆಚ್ಚಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ,1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭವಾಯಿತು. 1935 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣ ಮಾಡಲಾಯಿತು. ಕನ್ನಡ ಸಾಹಿತ್ಯ ಪರಿಷತ್ ನಿಂದ ಹಲವು ಪ್ರತಿಭೆಗಳನ್ನು ಗುರುತಿಸಲಾಗುತ್ತಿದೆ. ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ದತ್ತಿ ದಾನ ಮಾಡಬೇಕು. 450 ರು. ನೀಡಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗ ಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಎಸ್.ಎಸ್.ಸಂತೋಷ ಕುಮಾರ್ ಮಾತನಾಡಿ, ಮುಂಗಾರು ಸಂಭ್ರಮದಲ್ಲಿ ಕ.ಸಾ.ಪ ಸೀತೂರಿನಲ್ಲಿ ಆಷಾಡದಲ್ಲಿ ಸಾಹಿತ್ಯ ಸಂಭ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ. ಗಾದೆ, ಒಗಟುಗಳು ಇಂದಿನ ದಿನಮಾನದಲ್ಲಿ ಕಣ್ಮರೆಯಾಗುತ್ತಿದ್ದು ಇದಕ್ಕೆ ಮತ್ತೆ ಕಸಾಪ ಜೀವ ನೀಡುತ್ತಿದೆ. ಒಗಟು, ಗಾದೆಗಳನ್ನು ಕಸಾಪ ದಾಖಲಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ತಾ.ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಹೋಬಳಿ ಸಮ್ಮೇಳನವನ್ನು ಕಣಿವೆ ವಿನಯ ಅವರ ಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕನ್ನಡ ಕಾರ್ಯಕ್ರಮ ಪ್ರತಿ ಹಳ್ಳಿಗಳಲ್ಲಿ ನಡೆಸುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುತ್ತಿದ್ದೇವೆ. ಸಾಹಿತ್ಯದ ಜೊತೆಗೆ ಕಲೆ, ಸಂಸ್ಕೃತಿ, ಸಂಸ್ಕಾರ ಗಳನ್ನು ನೀಡುವ ಕೆಲಸ ಮಾಡುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ ಕಸಾಪ ಕಾರ್ಯಕ್ರಮ ನಡೆಸಿದಾಗ ಆ ಗ್ರಾಮಗಳ ಸಾಧಕ ರನ್ನು ಸನ್ಮಾನಿಸುತ್ತಿದ್ದೇವೆ. ಗಾದೆಗಳು, ಒಗಟುಗಳು ಬಿಡಿಸುವ ಸ್ಪರ್ಧೆ ನಡೆಸುತ್ತಿದ್ದೇವೆ ಎಂದರು.
ತಾ.ಕಸಾಪ ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಸೀತೂರು ಗ್ರಾಮ ಸಹಕಾರ, ಸಾಂಸ್ಕೃತಿಕ ಕ್ಷೇತ್ರವಾಗಿದೆ. ತಾಲೂಕಿನಲ್ಲೇ ಸೀತೂರು ವಿಶಿಷ್ಟ ಸ್ಥಾನ ಪಡೆದಿದೆ. ಈ ಭಾಗದ ಸಾಧಕರನ್ನು ಸನ್ಮಾನಿರುವುದು ಅರ್ಥಪೂರ್ಣ ಎಂದರು.
ಕಸಾಪ ಜಿಲ್ಲಾ ಸಂಚಾಲಕ ನಂಜುಂಡಪ್ಪ ಮಾತನಾಡಿ, ಗ್ರಾಮೀಣ ಭಾಗದ ಸಂಸ್ಕೃತಿ ವಿಭಿನ್ನವಾಗಿದೆ. ನಮ್ಮ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ. ಈ ಭಾಗದಲ್ಲಿ ಯಕ್ಷಗಾನ ಪ್ರಸಿದ್ಧಿ ಪಡೆದಿದೆ ಎಂದರು.
ಅತಿಥಿಗಳಾಗಿ ಕಸಾಪ ಜಿಲ್ಲಾ ಸಾಂಸ್ಕೃತಿಕ ರಾಯಬಾರಿ ಕಣಿವೆ ವಿನಯ್, ಗಾಯಿತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್, ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ರಂಗಿಣಿ ಯು ರಾವ್, ಸಹಕಾರ ಕ್ಷೇತ್ರದ ಸಾಧನೆಗಾಗಿ ವೈ.ಎಸ್.ಸುಬ್ರಮಣ್ಯ, ಸುದ್ದಿ ಮಾದ್ಯಮ ಕ್ಷೇತ್ರದ ಸಾಧನೆಗಾಗಿ ಯಡಗೆರೆ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ನಿಧನರಾದ ಖ್ಯಾತ ನಿರೂಪಕಿ ಅಪರ್ಣ ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಅಪರ್ಣ ಅವರ ಬಗ್ಗೆ ಹೋಬಳಿ ಕಾರ್ಯದರ್ಶಿ ನಾಗರಾಜ್ ಮಾತನಾಡಿದರು. , ಪಲ್ಲವಿ ಮತ್ತು ತಂಡದವರು ನಾಡಗೀತೆ ಹಾಡಿದರು.ರಂಗಿಣಿ ಯು ರಾವ್, ಶ್ರೀ ಗೌರಿ , ಸಂದ್ಯಾ ,ಜಯಲಕ್ಷ್ಮಿ , ದೀಪ ಇದ್ದರು.