ಮುಂಡರಗಿಯಲ್ಲಿ ದಾನಿಗಳ ಸಹಕಾರದಿಂದ ನಿರ್ಮಿಸಿರುವ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನ ತಾಲೂಕಿಗೆ ಹೆಮ್ಮೆ ತರುವಂತೆ ತಲೆ ಎತ್ತಿ ನಿಂತಿದೆ. ಈ ಭವನದಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆದು ಬರುವ ಮೂಲಕ ಯುವಕರಲ್ಲಿ ಹೆಚ್ಚು ಸಾಹಿತ್ಯಾಸಕ್ತಿ ಮೂಡುವಂತಾಗಲಿ.

ಮುಂಡರಗಿ: ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದ್ದು, ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಪರಿಷತ್ತುಗಳು ಜಂಟಿಯಾಗಿ ಯುವಕರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಸಾಹಿತ್ಯ ಶಿಬಿರಗಳನ್ನು ಏರ್ಪಡಿಸಬೇಕು ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ವಿಜಯಕುಮಾರ ಶಿಳ್ಳೀನ ಸಲಹೆ ನೀಡಿದರು.

ಇತ್ತೀಚೆಗೆ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆಯ ಸೌರಭ ಇವುಗಳ ಆಶ್ರಯದಲ್ಲಿ ಆಯೋಜಿಸಿದ್ದ ಶರಣ ಚಿಂತನ ಮಾಲೆ- 30ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂಡರಗಿಯಲ್ಲಿ ದಾನಿಗಳ ಸಹಕಾರದಿಂದ ನಿರ್ಮಿಸಿರುವ ಜಗದ್ಗುರು ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನ ತಾಲೂಕಿಗೆ ಹೆಮ್ಮೆ ತರುವಂತೆ ತಲೆ ಎತ್ತಿ ನಿಂತಿದೆ. ಈ ಭವನದಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆದು ಬರುವ ಮೂಲಕ ಯುವಕರಲ್ಲಿ ಹೆಚ್ಚು ಸಾಹಿತ್ಯಾಸಕ್ತಿ ಮೂಡುವಂತಾಗಲಿ ಎಂದರು.

ಶರಣೆ ಧೂಪದ ಗೊಗ್ಗವ್ವೆ ಕುರಿತು ಶಿಕ್ಷಕಿ ಅರುಣಾ ಗುಜ್ಜರಿ ಮಾತಾಡಿ, ಸ್ತ್ರೀಸಮಾನತೆ, ಲಿಂಗಾಂಗ ಸಾಮರಸ್ಯ, ಸಾಮಾಜಿಕ ಸಮಾನತೆಯನ್ನು ಎತ್ತಿ ಹಿಡಿದು ಕೇವಲ 6 ವಚನಗಳನ್ನು ರಚಿಸಿದ ಶರಣೆ ಧೂಪದ ಗೊಗ್ಗವ್ವೆ 12ನೇ ಶತಮಾನದ ಪ್ರಮುಖ ಶರಣೆಯರಲ್ಲಿ ಒಬ್ಬರಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಕಷ್ಟು ಪ್ರಯತ್ನ ಮಾಡಿದ್ದಳು ಎಂದರು.

ತಾಲೂಕು ಕಸಾಪದ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಆರ್.ಎಲ್. ಪೊಲೀಸಪಾಟೀಲ, ವಿ.ಎಫ್. ಗುಡದಪ್ಪನವರ, ಎಂ.ಎಸ್. ಹೊಟ್ಟೀನ, ಆರ್.ಕೆ. ರಾಯನಗೌಡ್ರ, ಶಂಕರ ಕುಕನೂರ, ಹನುಮರಡ್ಡಿ ಇಟಗಿ, ಮಹೇಶ ಮೇಟಿ ಸೇರಿದಂತೆ ಅನೇಕರು ಉಫಸ್ಥಿತರಿದ್ದರು. ಮಂಜುನಾಥ ಮುಧೋಳ ಸ್ವಾಗತಿಸಿ, ವೀಣಾ ಪಾಟೀಲ ನಿರೂಪಿಸಿ, ವಂದಿಸಿದರು.