ಹೆಬ್ರಿ ತಾಲೂಕು 6ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಶೇಡಿಮನೆ ಆಯ್ಕೆಯಾಗಿದ್ದಾರೆ. ಮಾ.1 ಶೇಡಿಮನೆ ಗ್ರಾಮದ ಅರಸಮ್ಮಕಾನುವಿನ ನಾಗಕನ್ನಿಕಾ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ತಾಲೂಕಿನ 6ನೇ ಸಾಹಿತ್ಯ ಸಮ್ಮೇಳನ
ಕಾರ್ಕಳ: ಹೆಬ್ರಿ ತಾಲೂಕು 6ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಶೇಡಿಮನೆ ಆಯ್ಕೆಯಾಗಿದ್ದಾರೆ. ಮಾ.1 ಶೇಡಿಮನೆ ಗ್ರಾಮದ ಅರಸಮ್ಮಕಾನುವಿನ ನಾಗಕನ್ನಿಕಾ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ತಾಲೂಕಿನ 6ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ.ಮಾ.20 ,1956 ರಂದು ಜನಿಸಿದ ಅವರು ಸಾಂತನಮಕ್ಕಿ, ಶೇಡಿಮನೆ, ಹೆಬ್ರಿ ತಾಲೂಕಿನ ಮೂಲ ನಿವಾಸಿಯಾಗಿದ್ದು, ದಿ.ಲಕ್ಷ್ಮಣ ಶೆಟ್ಟಿ ಆರ್ಡಿ ಮೇಲ್ಮನೆ ಮತ್ತು ದಿವಂಗತ ವೆಂಕಮ್ಮ ಶೆಡ್ತಿ ಮೂಡೂರು, ಚೇರ್ಕಾಡಿ ದಂಪತಿಯ ಪುತ್ರ. ಅವರ ಪತ್ನಿ ರಜನಿ ಜಿ. ಶೆಟ್ಟಿ ಮಂಚಿ ಮೂಡುಮನೆ. ಹಾಗು ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾರೆ.
ಅವರು 1980ರಿಂದ 1985ರವರೆಗೆ ರಾಮದುರ್ಗ, ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದು, 1986–87ರಲ್ಲಿ ಸರ್ಕಾರಿ ಪ್ರೌಢಶಾಲೆ ಆರ್ಡಿಯಲ್ಲಿ ಸಹಶಿಕ್ಷಕರಾಗಿ, 1988-94ರಲ್ಲಿ ಸರ್ಕಾರಿ ಪ್ರೌಢಶಾಲೆ ಹೊಸಂಗಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 1994ರಲ್ಲಿ ಕೆಇಎಸ್ ಪದವಿ ನಂತರ ನೇರ ನೇಮಕಾತಿ ಮೂಲಕ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿ ಆಯ್ಕೆಯಾಗಿ, 1994ರಿಂದ 2002ರವರೆಗೆ ಸಿದ್ಧಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.1997ರಲ್ಲಿ ಮೈಸೂರು ರಾಮಕೃಷ್ಣ ಆಶ್ರಮಕ್ಕೆ ಸರ್ಕಾರಿ ನಿಯೋಜನೆಯ ಮೂಲಕ ಕರ್ತವ್ಯ ನಿರ್ವಹಿಸಿ ಮೋರಲ್ ಆ್ಯಂಡ್ ಸ್ಪಿರಿಚುವಲ್ ಎಜುಕೇಶನ್ ವಿಷಯದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. 2002ರಿಂದ 2004ರವರೆಗೆ ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮನ್ವಯ ಅಧಿಕಾರಿಯಾಗಿ, 2004ರಿಂದ 2008ರವರೆಗೆ ಮಂಗಳೂರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದ್ದಾರೆ. 2008ರಿಂದ 2015ರವರೆಗೆ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ ನಾಲ್ಕು ವರ್ಷಗಳ ಕಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಿದ್ದರು.
2000-2001ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2011-2012ರಲ್ಲಿ ರಾಜ್ಯ ಮಟ್ಟದ ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ಹಾಗೂ 2014ರ ನ.28 ಮತ್ತು 29ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ರಾಷ್ಟ್ರಮಟ್ಟದ ‘ರಾಷ್ಟ್ರೀಯ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಪ್ರಸ್ತುತ ಅವರು ಪುರಾಣಿ ವಾಲಾಳು, ಮಾರ್ಗೋಳಿ, ಬಸ್ರೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆಯಲ್ಲಿ ವಾಸವಿದ್ದಾರೆ.