ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಾದರೆ ಕನ್ನಡ ’ಅನ್ನದ ಭಾಷೆ’ಯಾದಾಗ ಮಾತ್ರ ಕನ್ನಡ ಶಾಲೆಗಳು ಉಳಿಯಲು ಸಾಧ್ಯ. ಕರ್ನಾಟಕದಲ್ಲಿ ಆಡಳಿತಕ್ಕೆ ಬರುವ ಯಾವುದೇ ಸರ್ಕಾರವಾದರೂ ಕನ್ನಡ ಶಾಲೆಗಳ ಉಳಿವಿನ ಕುರಿತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಶೇ ೨೫ ಮೀಸಲಾತಿ ಸೌಲಭ್ಯ ಕಲ್ಪಿಸುವ ಕಾನೂನು ಜಾರಿಗೆ ಅಗತ್ಯವಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಾದರೆ ಕನ್ನಡ ’ಅನ್ನದ ಭಾಷೆ’ಯಾದಾಗ ಮಾತ್ರ ಕನ್ನಡ ಶಾಲೆಗಳು ಉಳಿಯಲು ಸಾಧ್ಯ. ಕರ್ನಾಟಕದಲ್ಲಿ ಆಡಳಿತಕ್ಕೆ ಬರುವ ಯಾವುದೇ ಸರ್ಕಾರವಾದರೂ ಕನ್ನಡ ಶಾಲೆಗಳ ಉಳಿವಿನ ಕುರಿತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಶೇ ೨೫ ಮೀಸಲಾತಿ ಸೌಲಭ್ಯ ಕಲ್ಪಿಸುವ ಕಾನೂನು ಜಾರಿಗೆ ಅಗತ್ಯವಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಮೈಸೂರು ನಗರದ ಎನ್. ಆರ್‌. ಮೊಹಲ್ಲಾದ ರಾಜೇಂದ್ರ ನಗರದಲ್ಲಿರುವ ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದ ಛಾಯಾ ರಂಗಮಂಟಪದಲ್ಲಿ ನಡೆದ ’ಕುವೆಂಪು ಶೈಕ್ಷಣಿಕ ಚಿಂತನೆಗಳು’ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ, ಮೊದಲು ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಉದ್ಯೋಗ ಸಿಗುವುದು ಖಾತ್ರಿಯಾದರೆ, ಆಗ ಜನ ಸಮುದಾಯ ಸಹಜವಾಗಿ ಕನ್ನಡ ಶಾಲೆಗಳತ್ತ ಮುಖ ಮಾಡುತ್ತದೆ. ಇದರಿಂದ ಕನ್ನಡ ಶಾಲೆಗಳ ಸಬಲೀಕರಣವಾಗುತ್ತದೆ. ಕನ್ನಡ ಸಾಹಿತ್ಯೇತಿಹಾಸದಲ್ಲಿ ಬಸವಣ್ಣನವರ ನಂತರ ವಿಶ್ವ ಮಾನವ ಸಾಹಿತ್ಯ ನೀಡಿದವರಲ್ಲಿ ಕುವೆಂಪು ಅಗ್ರಗಣ್ಯರು. ಆಧುನಿಕ ಕನ್ನಡ ಸಾಹಿತ್ಯ ವಲಯದ ಅಷ್ಟೂ ಪ್ರಕಾರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಮೊದಲ ಯುಗ ಪ್ರವರ್ತಕ ಕವಿ ಕುವೆಂಪು. ಆದ್ದರಿಂದಲೇ ಇವರನ್ನು ಜಗದ ಕವಿ, ಯುಗದ ಕವಿ, ರಸ ಋಷಿ ಎಂದು ಕರೆಯುತ್ತೇವೆ. ಕುವೆಂಪು ಕೇವಲ ಸಾಹಿತ್ಯ ಲೋಕದ ಧ್ರುವತಾರೆ ಅಲ್ಲ ಓರ್ವ ಶ್ರೇಷ್ಠ ಶಿಕ್ಷಣ ತಜ್ಞ ಎಂದರು. ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದ ಸಮಸಮಾಜದ ಕನಸು ನನಸು ಮಾಡುವ ಶಿಕ್ಷಣ ಪ್ರತಿಪಾದಿಸಿದ ಕುವೆಂಪು ಅವರ ಶೈಕ್ಷಣಿಕ ಚಿಂತನೆಗಳು ಸಾರ್ವಕಾಲಿಕವಾದವು ಎಂದ ಉಪ್ಪಾರ್‌ ಅವರು, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಥಮ ಸ್ಥಾನ ದೊರಕಲಿ ಎಂದಾಕ್ಷಣ ಬೇರೆಯವರಿಗೆ ಸ್ಥಾನವೇ ಇಲ್ಲವೆಂದೇನಲ್ಲ. ನಮ್ಮಲ್ಲಿಗೆ ಬೇರೆಯವರು ಬರಲಿ, ಅವರು ಅತಿಥಿಗಳಾಗಿ ಬರಲಿ. ಆದರೆ ಯಜಮಾನರಾಗಿ ಅಲ್ಲ ಎಂದು ಕವಿ ಕುವೆಂಪು ಅವರು ಹೇಳಿದ್ದಾರೆ ಎಂದು ಸ್ಮರಿಸಿದರು.

ಕನ್ನಡ ಉಪನ್ಯಾಸಕ ಡಾ. ಉಮೇಶ್ ಬೇವಿನಹಳ್ಳಿ ಮಾತನಾಡಿ "ವಿಶ್ವಜ್ಞಾನ, ವಿಶ್ವಪ್ರಜ್ಞೆ, ವಿಶ್ವಮೈತ್ರಿ ಹಾಗೂ ವಿಶ್ವಮಾನವ ಗುಣವನ್ನು ಕಲಿಸುವುದೇ ನಿಜವಾದ ಶಿಕ್ಷಣ ಎಂದು ಪ್ರತಿಪಾದಿಸಿದ ಕುವೆಂಪು ಅವರ ಶೈಕ್ಷಣಿಕ ಚಿಂತನೆಗಳ ದರ್ಶನವಾಗಬೇಕಾದರೆ, ಒಮ್ಮೆ ಮಾನಸ ಗಂಗೋತ್ರಿ ಹೊಕ್ಕಿ ಬರಬೇಕು. ಅಲ್ಲಿ ಕುವೆಂಪು ಅವರ ಬೌದ್ಧಿಕ ಮತ್ತು ಭೌತಿಕ ಶೈಕ್ಷಣಿಕ ನೆಲೆಗಳಿವೆ. ಯಾವುದೇ ಕಲಿಕೆ ಮಗುವಿಗೆ ಭಾರವಾಗಬಾರದು. ಮಗು ಬಯಸುವ ಶಿಕ್ಷಣ ಸಿಗಬೇಕು. ಅದರಲ್ಲೂ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮತ್ತು ಹಿಂದಿಯನ್ನು ಕಲಿಯುವಂತೆ ಮಕ್ಕಳ ಮೇಲೆ ಒತ್ತಡ ಹೇರಿ ಬಲಾತ್ಕಾರ ಮಾಡಬಾರದು. ಮಗು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವ ವಾತಾವರಣ ನಿರ್ಮಾಣ ಆಗಬೇಕು. ಇದು ಕುವೆಂಪು ಅವರ ಆಶಯವಾಗಿತ್ತು. ಇಂದು ಶಿಕ್ಷಣ ಕ್ಷೇತ್ರ ಹಲವು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದೆ. ಇಂತಹ ವಿಷಮ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆ ಕುರಿತು ರಾಜಕಾರಣಿಗಳು ಮತ್ತು ಅಧಿಕಾರಿಗಳು ತಮ್ಮ ಇಚ್ಛಾಶಕ್ತಿ ತೋರಬೇಕು. ಕುವೆಂಪು ಅವರು ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿಯೇ ಕಲಿಯಲಿ. ಕನ್ನಡದಲ್ಲಿ ಕಲೆ ಮತ್ತು ವಿಜ್ಞಾನ ಕಲಿತು, ಆತ್ಮಗೌರವ ಮತ್ತು ವೈಚಾರಿಕತೆ ಬೆಳೆಸಿಕೊಂಡು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಲಿ ಎಂದು ಸಾರಿದ ಮಹಾಚೇತನ ಎಂದರು.ವಿಚಾರಗೋಷ್ಠಿಯನ್ನು ಹಿರಿಯ ಪತ್ರಕರ್ತ ಕೆ. ನರಸಿಂಹಮೂರ್ತಿ ಉದ್ಘಾಟಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ಟಿ. ಸತೀಶ್ ಜವರೇಗೌಡ ಆಶಯ ನುಡಿಗಳನ್ನಾಡಿದರು. ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಂತೋಣಿ ಪೌಲ್ ರಾಜ್, ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ಜಿಲ್ಲಾ ಘಟಕದ ಅಧ್ಯಕ್ಷ ಬಸಪ್ಪ ಸಿ. ಸಾಲುಂಡಿ, ರಂಗಕರ್ಮಿ ಚಂದ್ರು ಮಂಡ್ಯ, ಯುವ ಕವಿ ಜಿ. ರವೀಂದ್ರ ಕುಮಾರ್‌ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಸಾರ್ವಜನಿಕ ಪ್ರೌಢಶಾಲಾ ಶಿಕ್ಷಕ ಬಸವರಾಜು ಕುವೆಂಪು ವಿರಚಿತ ’ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಆಯ್ದ ಭಾಗ ವಾಚಿಸಿದರು. ಕಾಲೇಜಿನ ಹತ್ತು ಪ್ರಶಿಕ್ಷಣಾರ್ಥಿಗಳು ಸ್ವರಚಿತ ಕವನ ವಾಚನ ಮಾಡಿದರು.